ಭೂಕಕ್ಷೆಯಿಂದ ಗುರಿಯತ್ತ ಚಂದ್ರಯಾನ-3 ಯಶಸ್ವಿ ಪಯಣ

Update: 2023-08-01 03:46 GMT

ಶ್ರೀಹರಿಕೋಟಾ: ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಹದಿನೈದು ದಿನಗಳ ಹಿಂದೆ ಯಶಸ್ವಿಯಾಗಿ ಗಗನಕ್ಕೆ ಚಿಮ್ಮಿರುವ ಚಂದ್ರಯಾನ-3 ಇದೀಗ ಭೂಕಕ್ಷೆಯ ಪಯಣ ಪೂರ್ಣಗೊಳಿಸಿದ್ದು, ಮಿಷನ್‍ನ ಮುಂದಿನ ಹಂತದಲ್ಲಿ ಚಂದ್ರನತ್ತ ಯಶಸ್ವಿಯಾಗಿ ಸಾಗುತ್ತಿದೆ ಎಂದು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪ್ರಕಟಿಸಿದೆ.

"ಚಂದ್ರಯಾನ-3 ಪಯಣ ತನ್ನ ಭೂಕಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಚಂದ್ರನತ್ತ ಸಾಗುತ್ತಿದೆ. ಚಂದ್ರ ಭೂಮಿಗೆ ಸನಿಹದಲ್ಲಿರುವ ಸ್ಥಾನದಿಂದ ಯಶಸ್ವಿಯಾಗಿ ಉಡಾಯಿಸಲಾಗಿದ್ದು, ಇಸ್ರೋ ಈ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಟ್ರಾನ್ಸ್‍ಲೂನಾರ್ ಕಕ್ಷೆಗೆ ಸೇರಿಸಿದೆ. ನೌಕೆಯ ಮುಂದಿನ ನಿಲುಗಡೆ ಚಂದ್ರ. ಇದು ಚಂದ್ರನತ್ತ ಆಗಮಿಸುತ್ತಿದ್ದಂತೆ ಆಗಸ್ಟ್ 5ರಂದು ಚಂದ್ರನ ಕಕ್ಷೆಗೆ ಜೋಡಿಸುವ ಕಾರ್ಯಾಚರಣೆ ನಡೆಸಲಾಗುತ್ತದೆ" ಎಂದು ಇಸ್ರೋ ಟ್ವೀಟ್ ಮಾಡಿದೆ.

ಸೋಮವಾರ ನಸುಕಿನ 12 ಗಂಟೆಯಿಂದ 12.30ರ ನಡುವೆ ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಚಂದ್ರಯಾನ-3 ಮಿಷಿನ್ ವೇಳಾಪಟ್ಟಿಗೆ ಅನುಗುಣವಾಗಿ ನಡೆದಿದ್ದು, ಬಾಹ್ಯಾಕಾಶ ನೌಕೆಯ ಸ್ಥಿತಿ ಸಹಜವಾಗಿದೆ ಎಂದು ಇಸ್ರೋ ಅಧಿಕಾರಿಗಳು ಹೇಳಿದ್ದಾರೆ.

ಜುಲೈ 14ರಂದು ಮಧ್ಯಾಹ್ನ ಇಸ್ರೋದ ಉಡಾವಣಾ ವಾಹಕ ಮಾರ್ಕ್-3 ಮೂಲಕ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಯಾಗಿತ್ತು. 40 ದಿನಗಳ ಪಯಣದ ಬಳಿಕ ಬಾಹ್ಯಾಕಾಶ ನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ನಿರೀಕ್ಷೆ ಇದೆ. ಇದು ಯಶಸ್ವಿಯಾದಲ್ಲಿ ಚಂದ್ರನ ಮೇಲ್ಮೈ ಮೇಲೆ ಇಳಿಯುವ ನಾಲ್ಕನೇ ದೇಶವಾಗಿ ಭಾರತ ದಾಖಲೆಗೆ ಸೇರಲಿದೆ ಹಾಗೂ ಚಂದ್ರದ ದಕ್ಷಿಣ ಧ್ರುವದಲ್ಲಿ ಇಳಿಯುವ ಮೊಟ್ಟಮೊದಲ ದೇಶವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News