ಸಂಘ ಪರಿವಾರದ ಕೋಮುವಾದಿ ಕಾರ್ಯಸೂಚಿಯು ಅಪಾಯವನ್ನು ಎತ್ತಿ ತೋರಿಸಿದೆ: ಪಿಣರಾಯಿ ವಿಜಯನ್ ಕಳವಳ

Update: 2023-08-28 17:44 GMT

ತಿರುವನಂತಪುರಂ: ಸಂಘ ಪರಿವಾರದ ಕೋಮುವಾದಿ ಕಾರ್ಯಸೂಚಿಯು ವ್ಯಕ್ತಿಯೊಬ್ಬನನ್ನು ಹೇಗೆ ಪೈಶಾಚಿಕಗೊಳಿಸಬಹುದು ಎಂಬ ಅಪಾಯವನ್ನು ಮುಝಾಫ್ಪರ್ ನಗರದ ಶಾಲಾ ಪ್ರಕರಣವು ಎತ್ತಿ ತೋರಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿರುವುದಾಗಿ indianexpress.com ವರದಿ ಮಾಡಿದೆ.

ಉತ್ತರ ಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬಳು ತನ್ನ ತರಗತಿಯಲ್ಲಿನ ಮುಸ್ಲಿಂ ವಿದ್ಯಾರ್ಥಿಗೆ ಹೊಡೆಯುವಂತೆ ಇತರ ಮಕ್ಕಳಿಗೆ ಸೂಚಿಸಿರುವ ಘಟನೆಯನ್ನು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಉಲ್ಲೇಖಿಸಿರುವ ಪಿಣರಾಯಿ ವಿಜಯನ್, “ಕೋಮುವಾದವು ಯಾವುದೇ ವ್ಯಕ್ತಿ ತನ್ನನ್ನು ತಾನು ತೀರಾ ಕೆಳ ಮಟ್ಟಕ್ಕಿಳಿಸಿಕೊಳ್ಳುವ ಮನಸ್ಥಿತಿಯನ್ನು ಬೆಳೆಸುತ್ತದೆ ಎಂಬುದನ್ನು ಈ ಘಟನೆಯು ನಮಗೆ ಮನವರಿಕೆ ಮಾಡಿಕೊಟ್ಟಿದೆ. ಸಂಘ ಪರಿವಾರದ ಸೈದ್ಧಾಂತಿಕತೆಗೆ ವಿರುದ್ಧವಾಗಿ ನಾವು ಬಲಿಷ್ಠ ಪ್ರತಿರೋಧವನ್ನು ನಿರ್ಮಿಸಬೇಕು ಎಂಬ ಎಚ್ಚರಿಕೆಯನ್ನು ಈ ಘಟನೆ ನೀಡಿದೆ. ಈ ಹೊಣೆಗಾರಿಕೆಯನ್ನು ಸಾಕಾರಗೊಳಿಸಲು ಎಲ್ಲ ಪ್ರಜಾಸತ್ತಾತ್ಮಕ ಜಾತ್ಯತೀತ ವ್ಯಕ್ತಿಗಳು ಕೈಜೋಡಿಸಬೇಕಿದೆ” ಎಂದು ಪಿಣರಾಯಿ ಕರೆ ನೀಡಿದ್ದಾರೆ.

“ಈ ಘಟನೆಯು, ಕೋಮುವಾದ ಹಾಗೂ ನಿರಂಕುಶವಾದವು ಮನುಷ್ಯನಲ್ಲಿನ ಪ್ರೀತಿ ಹಾಗೂ ಸಹಾನುಭೂತಿಯ ಕೊನೆ ಹನಿಯನ್ನೂ ಇಂಗಿಸಬಲ್ಲವು ಎಂಬುದನ್ನು ನಮಗೆ ಮತ್ತೆ ನೆನಪಿಸಿದೆ. ಏಳು ವರ್ಷದ ಬಾಲಕನನ್ನು ಆತನ ಧರ್ಮದ ಕಾರಣಕ್ಕೆ ಶಿಕ್ಷಿಸಿರುವುದು ಮಾತ್ರವಲ್ಲದೆ, ಆ ಶಿಕ್ಷೆಯನ್ನು ಅನ್ಯ ಧರ್ಮದ ವಿದ್ಯಾರ್ಥಿಗಳನ್ನು ಬಳಸಿಕೊಂಡು ಕಾರ್ಯಗತಗೊಳಿಸಿರುವ ಆ ಶಿಕ್ಷಕಿಯಲ್ಲಿ ಅದೆಂಥ ಕೋಮುವಾದದ ವಿಷ ಮನೆ ಮಾಡಿಬಹುದು?” ಎಂದು ಅವರು ತಮ್ಮ ಆಘಾತ ವ್ಯಕ್ತಪಡಿಸಿದ್ದಾರೆ.

ಸಂಘ ಪರಿವಾರವು ಮಾಡಿರುವ ಆಳವಾದ ಗಾಯಕ್ಕೆ ಮುಝಾಫ್ಪರ್ ನಗರದ ಘಟನೆಯೊಂದೇ ಏಕೈಕ ನಿದರ್ಶನವಲ್ಲ. ಪ್ರಜಾಪ್ರಭುತ್ವದ ಬಹು ದೊಡ್ಡ ಉದಾಹರಣೆಯಾದ ಭಾರತವನ್ನು ದ್ವೇಷದ ನೆಲವಾಗಿಸಲು ಹಿಂದುತ್ವ ಕೋಮುವಾದ ಪ್ರಯತ್ನಿಸುತ್ತಿದೆ. ಉತ್ತರ ಪ್ರದೇಶ, ಹರ್ಯಾಣ ಹಾಗೂ ಮಣಿಪುರದಲ್ಲಿನ ವರದಿಗಳು ಈ ಮಾತನ್ನು ಸಮರ್ಥಿಸುತ್ತಿವೆ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News