ರಾಹುಲ್ ಗಾಂಧಿ ಅಮೆರಿಕ ಪ್ರವಾಸ | ಭಾರತದ ಜೊತೆಗಿನ ಬಾಂಧವ್ಯ ಬಲಪಡಿಸುವ ಬಗ್ಗೆ ಮಾತುಕತೆ
ಹೊಸದಿಲ್ಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೂರು ದಿನಗಳ ಪ್ರವಾಸಕ್ಕೆ ಅಮೆರಿಕಕ್ಕೆ ತೆರಳಿದ್ದು, ಈ ವೇಳೆ ಭಾರತ- ಅಮೆರಿಕ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ದೃಷ್ಟಿಯಲ್ಲಿ ಮಾತುಕತೆಯನ್ನು ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಅಮೆರಿಕದ ಟೆಕ್ಸಾಸ್ ನ ಡಲ್ಲಾಸ್ನಲ್ಲಿ ಅನಿವಾಸಿ ಭಾರತೀಯರು ಮತ್ತು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಸದಸ್ಯರು ನನ್ನನ್ನು ಆತ್ಮೀಯವಾಗಿ ಸ್ವಾಗತಿಸಿದ್ದು, ನಾನು ಸಂತೋಷಗೊಂಡಿದ್ದೇನೆ. ಈ ಭೇಟಿಯ ವೇಳೆ ಭಾರತ-ಅಮೆರಿಕ ನಡುವಿನ ಬಾಂಧವ್ಯ ಬಲಪಡಿಸುವ ದೃಷ್ಟಿಯಿಂದ ಮಾತುಕತೆಯನ್ನು ನಡೆಸಲು ನಾನು ಉತ್ಸುಕನಾಗಿದ್ದೇನೆ ಎಂದು ರಾಹುಲ್ ಗಾಂಧಿ ಫೇಸ್ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಡಲ್ಲಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಗೆ ಅದ್ದೂರಿಯಾಗಿ ಸ್ವಾಗತವನ್ನು ಮಾಡಲಾಗಿದೆ ಎಂದು ಹೇಳಿಕೊಂಡಿದೆ.
ಮೂರು ದಿನಗಳ ಅವಧಿಯಲ್ಲಿ ರಾಹುಲ್ ಗಾಂಧಿ ಅವರು ರಾಷ್ಟ್ರೀಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಚಿಂತಕರ ಚಾವಡಿಯ ಮೂಲಕ ಜನರನ್ನು ಭೇಟಿ ಮಾಡಲಿದ್ದಾರೆ. ಜಾರ್ಜ್ಟೌನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದವನ್ನು ನಡೆಸಲಿದ್ದಾರೆ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ಅಲಂಕರಿಸಿದ ಬಳಿಕ ಇದು ಅಮೆರಿಕಕ್ಕೆ ರಾಹುಲ್ ಗಾಂಧಿಯ ಮೊದಲ ಭೇಟಿಯಾಗಿದೆ.
Shri @RahulGandhi received a warm welcome from the Indian Diaspora and members of the Indian Overseas Congress. Dallas Fort Worth International Airport, Texas, USA pic.twitter.com/8cMeNqDWoB
— Congress (@INCIndia) September 8, 2024