ಏಳು ಸ್ವಪಕ್ಷೀಯ ಸಚಿವರ ಪದಚ್ಯುತಿಗೆ ಕಾಂಗ್ರೆಸ್ ಶಾಸಕರ ಪಟ್ಟು
ರಾಂಚಿ: ಜಾರ್ಖಂಡ್ ನಲ್ಲಿ ಅಧಿಕಾರಕ್ಕೆ ಬಂದಿರುವ ಚಂಪೈ ಸೊರೇನ್ ಸಂಪುಟದಲ್ಲಿ ಪಕ್ಷದ ಕೋಟಾದಿಂದ ಸಚಿವರಾಗಿರುವ ಏಳು ಮಂದಿಯನ್ನು ತಕ್ಷಣ ಪದಚ್ಯುತಿಗೊಳಿಸಿ ಹೊಸಬರಿಗೆ ಅವಕಾಶ ನೀಡಬೇಕು ಎಂಬ ತಮ್ಮ ಆಗ್ರಹವನ್ನು ಎಐಸಿಸಿ ಕೇಂದ್ರ ನಾಯಕರಿಗೆ ಮಂಡಿಸುವ ಸಲುವಾಗಿ ರಾಜ್ಯದ ಒಂಬತ್ತು ಮಂದಿ ಶಾಸಕರು ಶನಿವಾರ ಸಂಜೆ ದೆಹಲಿ ತಲುಪಿದ್ದಾರೆ.
ಶುಕ್ರವಾರ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದ ಬಳಿಕ 12 ಮಂದಿ ಭಿನ್ನಮತೀಯ ಶಾಸಕರ ಜತೆ ನಡೆಸಿದ ಸರಣಿ ಮಾತುಕತೆಗಳು ವಿಫಲವಾದ ಬೆನ್ನಲ್ಲೇ ಒಂಬತ್ತು ಮಂದಿ ಶಾಸಕರು ದೆಹಲಿಯಾತ್ರೆ ಕೈಗೊಂಡಿದ್ದಾರೆ. ಶನಿವಾರ ಕೂಡಾ ದೆಹಲಿಗೆ ಆಗಮಿಸುವ ಮುನ್ನ ಸರ್ಕ್ಯೂಟ್ ಹೌಸ್ ಮತ್ತು ನಗರದ ಹೋಟೆಲ್ ನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದವು.
ಇದಕ್ಕೂ ಕೆಲ ಗಂಟೆಗಳಿಗೆ ಮುನ್ನ ಮಿತ್ರಪಕ್ಷವಾದ ಜೆಎಂಎಂನ ದುಮ್ಕಾ ಶಾಸಕ ಹಾಗೂ ಹೊಸದಾಗಿ ಸಂಪುಟ ಸೇರಿರುವ ಬಸಂತ್ ಸೊರೇನ್ ಅವರು ಕೂಡಾ ಭಿನ್ನಮತೀಯ ಶಾಸಕರನ್ನು ಭೇಟಿ ಮಾಡಿ ಶಮನಗೊಳಿಸುವ ಪ್ರಯತ್ನ ನಡೆಸಿದ್ದು ವಿಫಲವಾಯಿತು.
ಆಡಳಿತಾರೂಢ ಮೈತ್ರಿಕೂಟದಲ್ಲಿ ಪ್ರಮುಖ ಪಕ್ಷವಾದ ಕಾಂಗ್ರೆಸ್ 17 ಶಾಸಕರನ್ನು ಹೊಂದಿದೆ. ಈ ಪೈಕಿ ನಾಲ್ವರು ಸಚಿವರನ್ನು ಹೊರತುಪಡಿಸಿ, ನಾಲ್ಕು ಮಂದಿ ಶಾಸಕರು ಇತರ ಕಾರಣಗಳಿಂದಾಗಿ ರಾಂಚಿಯಲ್ಲೇ ಉಳಿದುಕೊಂಡಿದ್ದಾರೆ. ಈ ಪೈಕಿ ಶಿಲ್ಪಿ ನೇಹಾ ಟಿರ್ಕೆ (ಮಂದರ್), ಪೂರ್ಣಿಮಾ ನೀರಜ್ ಸಿಂಗ್ (ಝಾರಿಯಾ) ಮತ್ತು ರಾಮಚಂದ್ರ ಸಿಂಗ್ (ಮನಿಕಾ) ಭಾನುವಾರ ದೆಹಲಿಗೆ ತಲುಪುವ ನಿರೀಕ್ಷೆ ಇದೆ. ಪೊರಿಯಾಹಾತ್ ಶಾಸಕ ಪ್ರದೀಪ್ ಯಾದವ್ ಕೂಡಾ 12 ಮಂದಿಯ ಬಣದಲ್ಲಿಲ್ಲ.
ಜಾರ್ಖಂಡ್ ನಲ್ಲಿ ತಲೆದೋರಿರುವ ಬಿಕ್ಕಟ್ಟಿನ ಶಮನಕ್ಕೆ ಎಐಸಿಸಿ, ಗಂಧ್ವಾನಿ (ಮಧ್ಯಪ್ರದೇಶ) ಶಾಸಕ ಉಮಂಗ್ ಸಿಂಘರ್ ಅವರನ್ನು ವೀಕ್ಷಕರನ್ನಾಗಿ ನೇಮಿಸಿದೆ. ಇವರು ಭಾನುವಾರ ದೆಹಲಿ ತಲುಪಿ, ಪ್ರತಿಭಟನಾ ನಿರತ ಶಾಸಕರ ಜತೆ ಮಾತುಕತೆ ನಡೆಸುವರು.