ಎಲ್ಲಾ ಚುನಾವಣಾ ಭರವಸೆಗಳನ್ನು ಈಡೇರಿಸಿದ್ದೇವೆ: ಕಾಂಗ್ರೆಸ್ ಆಡಳಿತದ ರಾಜ್ಯಗಳಿಂದ ಬಿಜೆಪಿಗೆ ತಿರುಗೇಟು
ಮುಂಬೈ: ಕಾಂಗ್ರೆಸ್ ಆಡಳಿತದ ರಾಜ್ಯ ಸರಕಾರಗಳು ತಮ್ಮ ಚುನಾವಣಾ ಭರವಸೆಗಳನ್ನು ಈಡೇರಿಸಲು ವಿಫಲವಾಗಿವೆ ಎಂಬ ಬಿಜೆಪಿಯ ಆರೋಪಗಳಿಗೆ ತೆಲಂಗಾಣ ಮತ್ತು ಹಿಮಾಚಲಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕರ್ನಾಟಕದ ಉಪಮುಖ್ಯಮಂತ್ರಿ ಶನಿವಾರ ತಿರುಗೇಟು ನೀಡಿದ್ದಾರೆ.
ಮುಂಬೈಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ಹಿಮಾಚಲಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಮತ್ತು ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿಜೆಪಿಯ ಆರೋಪಗಳನ್ನು ತಳ್ಳಿಹಾಕಿದರು.
ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ವಿಧಾನಸಭಾ ಚುನಾವಣೆ ನಡೆಯಲಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಯಕ್ರಮಗಳ ಪ್ರಯೋಜನವನ್ನು ಜನರು ಹೇಗೆ ಪಡೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ನೋಡಲು ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಮೈತ್ರಿಕೂಟದ ನಾಯಕರು ರಾಜ್ಯಕ್ಕೆ ಭೇಟಿ ನೀಡಬೇಕು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ‘‘ರಾಜ್ಯದಲ್ಲಿ 10 ತಿಂಗಳುಗಳಲ್ಲಿ ನಮ್ಮ ಸರಕಾರವು ಯುವಜನರಿಗೆ 50,000 ಉದ್ಯೋಗಗಳನ್ನು ಒದಗಿಸಿದೆ’’ ಎಂದು ಹೇಳಿದರು. ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮಹಾರಾಷ್ಟ್ರದಲ್ಲಿ ಅವರ ಹೇಳಿಕೊಳ್ಳುವಂಥ ಸಾಧನೆ ಏನೂ ಇಲ್ಲ ಎಂದರು. ಬೃಹತ್ ಬಂಡವಾಳ ಹೂಡಿಕೆಯ ಯೋಜನೆಗಳು ಮಹಾರಾಷ್ಟ್ರದಿಂದ ಗುಜರಾತ್‌ಗೆ ಹೋಗುತ್ತಿವೆ ಎಂದು ಅವರು ದೂರಿದರು.
ಹಳೆಯ ಪಿಂಚಣಿ ಯೋಜನೆಯನ್ನು ತನ್ನ ಸರಕಾರ ಜಾರಿಗೊಳಿಸಿದೆ ಎಂದು ಹೇಳಿದ ಹಿಮಾಚಲಪ್ರದೇಶ ಮುಖ್ಯಮಂತ್ರಿ ಸುಖು, ಈ ನಿರ್ಧಾರವು ಜನರ ಮೇಲೆ ಧನಾತ್ಮಕ ಪರಿಣಾಮ ಬೀರಿದೆ ಎಂದು ಹೇಳಿದರು. ‘‘ಹಣ ಬಲದಿಂದ ಸರಕಾರವನ್ನು ಉರುಳಿಸುವುದು ಪ್ರಜಾಪ್ರಭುತ್ವವೇ ಎನ್ನುವುದನ್ನು ಮಹಾರಾಷ್ಟ್ರದ ಜನರು ತೀರ್ಮಾನಿಸಬೇಕು’’ ಎಂದು ಅವರು ಹೇಳಿದರು.
ಕಾಂಗ್ರೆಸ್‌ನ ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ಹಿಮಾಚಲಪ್ರದೇಶ ಮುಖ್ಯಮಂತ್ರಿ ಸುಖು ವಿಫಲರಾಗಿದ್ದಾರೆ ಎಂದು ಸೋಮವಾರ ಬಿಜೆಪಿ ಆರೋಪಿಸಿತ್ತು. ರಾಜ್ಯದಲ್ಲಿ ಅಭಿವೃದ್ಧಿ ನಿಂತುಹೋಗಿದೆ ಹಾಗೂ ವಿಫಲ ಆರ್ಥಿಕ ನಿರ್ವಹಣೆಯ ಫಲವಾಗಿ 22 ತಿಂಗಳುಗಳಲ್ಲಿ 25,000 ಕೋಟಿ ರೂ. ಸಾಲ ಪಡೆಯಲಾಗಿದೆ ಎಂದು ಅದು ಹೇಳಿಕೊಂಡಿತ್ತು.
ಈ ಹೇಳಿಕೆಗಳನ್ನು ಸುಖು ನಿರಾಕರಿಸಿದ್ದಾರೆ.
ಮಹಾವಿಕಾಸ ಅಘಾಡಿಯ 5 ಗ್ಯಾರಂಟಿಗಳು:
ಮಹಾರಾಷ್ಟ್ರದ ಪ್ರತಿಪಕ್ಷ ಮೈತ್ರಿಕೂಟವು ಬುಧವಾರ ಮುಂಬೈಯಲ್ಲಿ ನಡೆದ ಸಭೆಯೊಂದರಲ್ಲಿ ಐದು ಪ್ರಮುಖ ‘‘ಗ್ಯಾರಂಟಿ’’ಗಳನ್ನು ಘೋಷಿಸಿದೆ. ಅವುಗಳೆಂದರೆ:
1.ಒಂದು ಕುಟುಂಬದ ಒಬ್ಬ ಮಹಿಳೆಗೆ ಪ್ರತಿ ತಿಂಗಳು 3,000 ರೂ.
2. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
3. ಎಲ್ಲಾ ರೈತರ 3 ಲಕ್ಷ ರೂ.ವರೆಗಿನ ಸಾಲ ಮನ್ನಾ
4. ನಿಯಮಿತವಾಗಿ ಸಾಲ ಮರುಪಾವತಿ ಮಾಡುವ ರೈತರಿಗೆ 50,000 ರೂ. ಪ್ರೋತ್ಸಾಹ ಧನ
5. ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 4,000 ರೂ. ಪಾವತಿ