ಹೋರಾಟ ಬಿಜೆಪಿ ವಿರುದ್ಧವೋ ಅಥವಾ ಎಲ್‌ಡಿಎಫ್ ವಿರುದ್ಧವೋ ಎಂಬುದನ್ನು ಕಾಂಗ್ರೆಸ್ ನಿರ್ಧರಿಸಬೇಕು: ಕೇರಳ ಸಿಎಂ ಪಿಣರಾಯಿ

Update: 2023-12-05 15:19 GMT

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (PTI)

ಹೊಸದಿಲ್ಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ವಯನಾಡ್‌ನಲ್ಲಿ ಕಣಕ್ಕಿಳಿಸುವ ಸಂದರ್ಭ ತಾನು ಹೋರಾಡುವುದು ಬಿಜೆಪಿ ವಿರುದ್ಧವೋ ಅಥವಾ ಎಲ್‌ಡಿಎಫ್ ವಿರುದ್ಧವೋ ಎಂಬುದನ್ನು ಕಾಂಗ್ರೆಸ್ ನಿರ್ಧರಿಸಬೇಕಾಗುತ್ತದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಗಳವಾರ ಹೇಳಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ರೂಪಿಸಿರುವ ಪ್ರತಿಪಕ್ಷವಾದ ‘ಇಂಡಿಯಾ’ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಹಾಗೂ ಎಲ್‌ಡಿಎಫ್ ಭಾಗವಾಗಿದೆ ಎಂದು ಅವರು ಹೇಳಿದರು.

ಒಂದು ವೇಳೆ ಮೈತ್ರಿಯ ಅಗತ್ಯವಿಲ್ಲದೇ ಇದ್ದರೆ, ಕೇರಳದಲ್ಲಿ ಕಾಂಗ್ರೆಸ್ ಹಾಗೂ ಎಲ್‌ಡಿಎಫ್ ನಡುವೆ ಸ್ಫರ್ಧೆ ನಡೆಯಲಿದೆ ಎಂದ ವಿಜಯನ್, ಎಲ್‌ಡಿಎಫ್ ವಯನಾಡಿನಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಸ್ಪಷ್ಟಪಡಿಸಿದರು.

‘‘ರಾಹುಲ್ ಗಾಂಧಿ ಅವರು ಕೇರಳದಲ್ಲಿ ಬಿಜೆಪಿ ವಿರುದ್ಧ ಹೋರಾಡಬೇಕೇ ಅಥವಾ ಎಲ್‌ಡಿಎಫ್ ವಿರುದ್ಧ ಹೋರಾಡಬೇಕೇ ಎಂಬುದನ್ನು ಕಾಂಗ್ರೆಸ್ ನಿರ್ಧರಿಸಬೇಕಿದೆ. ಕೇರಳದಲ್ಲಿ ನೀವು ಬಿಜೆಪಿಯ ವಿರುದ್ಧ ಹೋರಾಡುತ್ತಿರೋ ಅಥವಾ ಸ್ಫರ್ಧಿಸುತ್ತಿರೋ ಎಂದು ಹೇಳಲು ಸಾಧ್ಯವೇ’’ ಎಂದು ಅವರು ಇಲ್ಲಿ ಪತ್ರಿಕಾಗೊಷ್ಠಿಯಲ್ಲಿ ಹೇಳಿದರು.

ಸದಸ್ಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಎಲ್ಲಿ ಕಣಕ್ಕಿಳಿಸಬೇಕು ಎಂದು ‘ಇಂಡಿಯಾ’ ಮೈತ್ರಿಕೂಟ ನಿರ್ಧರಿಸಿಲ್ಲ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಅವರು ವಯನಾಡಿನಿಂದ ಸ್ಪರ್ಧಿಸುವ ವರದಿಯ ಕುರಿತು ಆಡಳಿತಾರೂಢ ಸಿಪಿಎಂ ಟೀಕಿಸಿದ ಒಂದು ದಿನದ ಬಳಿಕ ಪಿಣರಾಯಿ ವಿಜಯನ್ ಈ ಹೇಳಿಕೆ ನೀಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News