ʼINDIAʼ ಮೈತ್ರಿಕೂಟ ಒಟ್ಟಾಗಿರಬೇಕೆಂದು ಕಾಂಗ್ರೆಸ್‌ ಬಯಸುತ್ತದೆ: ಟಿಎಂಸಿ ಅಭ್ಯರ್ಥಿಗಳ ಪಟ್ಟಿ ಘೋಷಣೆಗೆ ಕೈ ನಾಯಕರ ಅಸಮಾಧಾನ

Update: 2024-03-10 11:03 GMT

Photo: PTI 

ಕೋಲ್ಕತ್ತಾ: ಸೀಟು ಹಂಚಿಕೆ ವಿಚಾರದಲ್ಲಿ INDIA ಮೈತ್ರಿಕೂಟದೊಳಗೆ ಭಿನ್ನಮತ ತಲೆದೋರುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲೇ ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದ ಎಲ್ಲಾ 42 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಮುಂಬರುವ ಚುನಾವಣೆಗೆ ಸೀಟು ಹಂಚಿಕೆಯ ಮಾತುಕತೆ ಇನ್ನೂ ನಡೆಯುತ್ತಿದೆ ಎಂದು ಕೆಲವೇ ದಿನಗಳ ಹಿಂದೆ ಹೇಳಿದ್ದ ಕಾಂಗ್ರೆಸ್‌ಗೆ ಇದು ಭಾರೀ ಹಿನ್ನಡೆಯಾಗಿದೆ.

ಇದರೊಂದಿಗೆ, ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್‌ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿದೆ.

“ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯೊಂದಿಗೆ ಗೌರವಾನ್ವಿತ ಸೀಟು ಹಂಚಿಕೆ ಒಪ್ಪಂದವನ್ನು ಹೊಂದಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ ಬಯಕೆಯನ್ನು ಪದೇ ಪದೇ ಘೋಷಿಸಿದೆ. ಅಂತಹ ಒಪ್ಪಂದವನ್ನು ಮಾತುಕತೆಗಳ ಮೂಲಕ ಅಂತಿಮಗೊಳಿಸಬೇಕೇ ಹೊರತು ಏಕಪಕ್ಷೀಯ ಘೋಷಣೆಗಳಿಂದಲ್ಲ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯಾವಾಗಲೂ ಸಮರ್ಥಿಸುತ್ತದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯಾವಾಗಲೂ ʼINDIAʼ ಮೈತ್ರಿಕೂಟ ಒಟ್ಟಾಗಿ ಬಿಜೆಪಿ ವಿರುದ್ಧ ಹೋರಾಡಲು ಬಯಸುತ್ತದೆ” ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಅವರು ಟ್ವೀಟ್‌ ಮಾಡಿದ್ದಾರೆ.

ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯಲ್ಲಿ, ತೃಣಮೂಲ ಕಾಂಗ್ರೆಸ್ ಕನಿಷ್ಠ ಎಂಟು ಹಾಲಿ ಸಂಸದರನ್ನು ಕೈಬಿಟ್ಟಿದ್ದು, ಮಾಜಿ ಕ್ರಿಕೆಟಿಗರಾದ ಯೂಸುಫ್ ಪಠಾಣ್ ಮತ್ತು ಕೃತಿ ಆಝಾದ್ ಅವರಂತಹ ಹಲವಾರು ಹೊಸ ಮುಖಗಳನ್ನು ಕಣಕ್ಕಿಳಿಸುತ್ತಿದೆ.

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಐದು ಬಾರಿ ಗೆದ್ದಿರುವ ಬಹರಂಪುರ ಲೋಕಸಭಾ ಕ್ಷೇತ್ರದಿಂದ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ಸ್ಪರ್ಧಿಸಲಿದ್ದು, ಚೌಧರಿ ಅವರ ಭದ್ರಕೋಟೆಯಿಂದ ಜನಪ್ರಿಯ ವ್ಯಕ್ತಿಯನ್ನು ಕಣಕ್ಕಿಳಿಸಿರುವುದು ಟಿಎಂಸಿಯ ಪ್ರತಿಕ್ರಿಯೆಯಾಗಿಯೂ ಕಂಡುಬರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News