ಕಾರ್ಪೊರೇಟ್ ಪವರ್ ಹಗರಣ: 500 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮುಟ್ಟುಗೋಲು

Update: 2024-10-29 02:34 GMT

ಹೊಸದಿಲ್ಲಿ: ಹಲವು ರಾಜ್ಯಗಳಲ್ಲಿ ನಡೆದ ಸುಮಾರು ನಾಲ್ಕು ಸಾವಿರ ಕೋಟಿ ರೂಪಾಯಿ ಮೌಲ್ಯದ ಕಾರ್ಪೊರೇಟ್ ಪವರ್ ಬ್ಯಾಂಕ್ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು 500 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರ, ಬಿಹಾರ, ಜಾರ್ಖಂಡ್ ಮತ್ತು ಆಂಧ್ರಪ್ರದೇಶದಲ್ಲಿದ್ದ ಕಾರ್ಪೊರೇಟ್ ಪವರ್ ಲಿಮಿಟೆಡ್ ಮತ್ತು ಅದರ ಪ್ರವರ್ತಕರು ಹಾಗೂ ನಿರ್ದೇಶಕರಾದ ಮನೋಜ್ ಜೈಸ್ವಾಲ್, ಅಭಿಜೀತ್ ಜೈಸ್ವಾಲ್ ಮತ್ತು ಅಭಿಷೇಕ್ ಜೈಸ್ವಾಲ್ ಅವರಿಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಕಳೆದ ಆಗಸ್ಟ್ ನಲ್ಲಿ ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಗಳ ಆಸ್ತಿಗಳ ಮೇಲೆ ದಾಳಿ ನಡೆಸಿ 223 ಕೋಟಿ ರೂಪಾಯಿ ಮೌಲ್ಯದ ಷೇರುಗಳು ಹಾಗೂ ಮ್ಯೂಚುವಲ್ ಫಂಡ್ ಗಳನ್ನು ವಶಪಡಿಸಿಕೊಂಡಿದ್ದರು. ಜತೆಗೆ ಲೆಕ್ಕದಲ್ಲಿ ತೋರಿಸದೇ ಇದ್ದ 56 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ದೂರುದಾರರಾದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಆರೋಪಿಗಳಿಂದ 11 ಸಾವಿರ ಕೋಟಿ ರೂಪಾಯಿ ಬಾಕಿ ವಸೂಲಾತಿಗೆ ಮನವಿ ಮಾಡಿಕೊಂಡಿತ್ತು. ಬ್ಯಾಂಕಿನಿಂದ ಸಾಲ ಪಡೆದು ಶೆಲ್ ಕಂಪನಿಗಳ ಮೂಲಕ ಇದನ್ನು ದುರುಪಯೋಗಪಡಿಸಿಕೊಂಡಿದ್ದಾಗಿ ಬ್ಯಾಂಕ್ ಆಪಾದಿಸಿತ್ತು.

ಇದೀಗ ಬ್ಯಾಂಕ್ ಠೇವಣಿ, ಮ್ಯೂಚುವಲ್ ಫಂಡ್ ಗಳು, ಷೇರುಗಳು, ಕಂಪನಿ ಖರೀದಿಸಿದ್ದ ವಿವಿಧ ಭೂ ಆಸ್ತಿಗಳು ಮತ್ತಯ ಕಟ್ಟಡಗಳನ್ನು ವಶಕ್ಕೆ ಪಡೆಯಲಾಗಿದೆ. ಜತೆಗೆ ಕಾರ್ಪೊರೇಟ್ ಪವರ್ ಲಿಮಿಟೆಡ್ ಹಾಗೂ ಮನೋಜ್ ಜೈಸ್ವಾಲ್ ಮತ್ತು ಕುಟುಂಬ ಸದಸ್ಯರ ಆಸ್ತಿಗಳನ್ನು ಕೂಡಾ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಈ.ಡಿ. ಅಧಿಕಾರಿಗಳು ಹೇಳಿದ್ದಾರೆ.

ಅಪರಾಧ ಪಿತೂರಿ, ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಆರೋಪದಲ್ಲಿ ಕಾರ್ಪೊರೇಟ್ ಪವರ್ ಲಿಮಿಟೆಡ್ ಪ್ರವರ್ತಕರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದ ಹಿನ್ನೆಲೆಯಲ್ಲಿ ಈ.ಡಿ ತನಿಖೆ ಆರಂಭಿಸಿತ್ತು.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News