ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ
Update: 2023-07-14 07:19 GMT
ಶ್ರೀಹರಿಕೋಟ: ಭಾರತದ ಮಹತ್ವಾಕಾಂಕ್ಷೆಯ ಚಂದ್ರನ ಮೇಲ್ಮೈ ಮೇಲೆ ಗಗನ ನೌಕೆ ಇಳಿಸಿ ಅಧ್ಯಯನ ಕೈಗೊಳ್ಳುವ ಉದ್ದೇಶದ ಚಂದ್ರಯಾನ-3 ಉಡಾವಣೆಯ ಐತಿಹಾಸಿಕ ಕ್ಷಣಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಡೀ ದೇಶವೇ ಇದನ್ನು ಕಾತರದಿಂದ ಕಾಯುತ್ತಿದೆ.
ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಲ್ಯಾಂಡರ್ (ವಿಕ್ರಮ್) ಹಾಗೂ ರೋವರ್ (ಪ್ರಜ್ಞಾನ)ಹೊತ್ತ ರಾಕೆಟ್ ಶುಕ್ರವಾರ ಮಧ್ಯಾಹ್ನ ನಭಕ್ಕೆ ಚಿಮ್ಮಲಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ವಿಜ್ಞಾನಿಗಳು, ತಂತ್ರಜ್ಞರ ತಂಡ ಸಿದ್ಧತೆಯನ್ನು ಪೂರ್ಣಗೊಳಿಸಿದೆ.
2019ರಲ್ಲಿ ಕೈಗೊಂಡಿದ್ದ ಚಂದ್ರಯಾನ-2 ಕಾರ್ಯಕ್ರಮ ಕೊನೆ ಗಳಿಗೆಯಲ್ಲಿ ವಿಫಲವಾಗಿತ್ತು. ಹಾಗಾಗಿ ಈ ಬಾರಿ ವಿಜ್ಞಾನಿಗಳು ಸಾಫ್ಟ್ ಲ್ಯಾಂಡಿಂಗ್ ಬಗ್ಗೆ ಗಮನ ಕೇಂದ್ರೀಕರಿಸಲಿದ್ದಾರೆ. ಲ್ಯಾಂಡರ್ ಗೆ ಯಾವುದೇ ರೀತಿಯ ಹಾನಿಯಾಗದಂತೆ ಅದನ್ನು ಚಂದ್ರನ ಮೇಲೆ ಇಳಿಸುವುದನ್ನು ಸಾಫ್ಟ್ ಲ್ಯಾಂಡಿಂಗ್ ಎಂದು ಕರೆಯುತ್ತಾರೆ.