2036ರ ವೇಳೆಗೆ 150 ಕೋಟಿ ದಾಟಲಿರುವ ದೇಶದ ಜನಸಂಖ್ಯೆ: ವರದಿ

Update: 2024-08-13 03:16 GMT

ಹೊಸದಿಲ್ಲಿ: ಭಾರತದ ಜನಸಂಖ್ಯೆ 2036ರ ವೇಳೆಗೆ 152.2 ಕೋಟಿಯನ್ನು ತಲುಪುವ ನಿರೀಕ್ಷೆ ಇದ್ದು, ಮಹಿಳೆಯರ ಪ್ರಮಾಣ ಹಾಲಿ ಇರುವ 48.5ಕ್ಕಿಂತ ಸ್ವಲ್ಪ ಸುಧಾರಣೆ ಕಂಡು 48.8ಕ್ಕೆ ತಲುಪಲಿದೆ ಎಂದು ಅಂಕಿ ಅಂಶಗಳು ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಪ್ರಕಟಿಸಿದ ವರದಿಯೊಂದು ಅಂದಾಜಿಸಿದೆ.

'ವುಮನ್ ಅಂಡ್ ಮೆನ್ ಇನ್ ಇಂಡಿಯಾ-2023' ವರದಿಯ ಪ್ರಕಾರ, ದೇಶದಲ್ಲಿ ಫಲವತ್ತತೆ ದರ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ 15 ವರ್ಷದೊಳಗಿನವರ ಪ್ರಮಾಣ ಗಣನೀಯವಾಗಿ ಕುಸಿಯುವ ಸಾಧ್ಯತೆ ಇದೆ. ಇದಕ್ಕೆ ವಿರುದ್ಧವಾಗಿ 60 ವರ್ಷ ಮೇಲ್ಪಟ್ಟವರ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ.

2011ರ ಅಂಕಿ ಅಂಶಕ್ಕೆ ಹೋಲಿಸಿದರೆ ದೇಶದಲ್ಲಿ ಲಿಂಗಾನುಪಾತ 2036ರ ವೇಳೆಗೆ 952ಕ್ಕೆ ಹೆಚ್ಚಲಿದೆ. ಹಾಲಿ 1000 ಪುರುಷರಿಗೆ 943 ಮಹಿಳೆಯರಿದ್ದರೆ, ಇದು ಸುಧಾರಣೆಯಾಗಲಿದೆ ಎಂದು ಲಿಂಗ ಸಮಾನತೆ ಕುರಿತ ಧನಾತ್ಮಕ ಪ್ರವೃತ್ತಿಯನ್ನು ವರದಿ ಬಿಂಬಿಸಿದೆ.

ಈ ವರದಿ ಭಾರತದಲ್ಲಿ ಪುರುಷರು ಮತ್ತು ಮಹಿಳೆಯರ ಸ್ಥಿತಿಗತಿ ಬಗೆಗಿನ ಸಮಗ್ರ ದೃಷ್ಟಿಕೋನವನ್ನು ನೀಡುವುದಾಗಿದ್ದು, ಜನಸಂಖ್ಯೆ, ಶಿಕ್ಷಣ, ಆರೋಗ್ಯ, ಆರ್ಥಿಕ ಪಾಲ್ಗೊಳ್ಳುವಿಕೆ ಹಾಗೂ ನಿರ್ಧಾರ ಕೈಗೊಳ್ಳುವ ಬಗೆಗಿನ ಮಾಹಿತಿಯನ್ನು ಒಳಗೊಂಡಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಲಿಂಗ ಅಸಮಾನತೆ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ವಿವಿಧ ಸಚಿವಾಲಯಗಳು, ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳು ಪ್ರಕಟಿಸಿದ ಅಂಕಿ ಅಂಶಗಳನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ.

ದೇಶದಲ್ಲಿ ವಯೋನಿರ್ದಿಷ್ಟ ಫಲವತ್ತತೆ ದರದ ಮಾಹಿತಿಯನ್ನೂ ವರದಿ ಒಳಗೊಂಡಿದ್ದು, 2016ರಿಂದ 2020ರ ಅವಧಿಯಲ್ಲಿ 20-24 ಹಾಗೂ 25-29 ವಯೋವರ್ಗದ ಫಲವತ್ತತೆ ದರ ಅನುಕ್ರಮವಾಗಿ 135.4 ಮತ್ತು 166.0 ಯಿಂದ 113.6 ಹಾಗೂ 139.6ಕ್ಕೆ ಕುಸಿದಿದೆ. 35-39ನೇ ವಯೋವರ್ಗದಲ್ಲಿ ಫಲವತ್ತತೆ ಪ್ರಮಾಣ 32.7 ರಿಂದ 35.6ಕ್ಕೆ ಹೆಚ್ಚಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News