ಜ್ಞಾನವಾಪಿ ಪ್ರಕರಣ: ಮಸೀದಿ ಸಮಿತಿಯ ಅರ್ಜಿ ವಜಾಗೊಳಿಸಿದ ಅಲಹಾಬಾದ್‌ ಹೈಕೋರ್ಟ್‌

Update: 2023-12-19 06:22 GMT
Photo: PTI

ಅಲಹಾಬಾದ್: ಜ್ಞಾನವಾಪಿ ಮಸೀದಿಯ ಸ್ಥಳದಲ್ಲಿರುವ ದೇವಸ್ಥಾನದ ಪುನರ್ ಸ್ಥಾಪನೆಗೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಪ್ರಶ್ನಿಸಿ ಜ್ಞಾನವಾಪಿ‌ ಮಸೀದಿ ಸಮಿತಿ ಸಲ್ಲಿಸಿದ ಅಪೀಲುಗಳನ್ನು ಅಲಹಾಬಾದ್‌ ಹೈಕೋರ್ಟ್ ಇಂದು ವಜಾಗೊಳಿಸಿದೆ.

ಈ ಕುರಿತಾದ ಸಿವಿಲ್‌ ವ್ಯಾಜ್ಯವನ್ನು ವಿಚಾರಣೆ ನಡೆಸುತ್ತಿರುವ ವಾರಣಾಸಿಯ ನ್ಯಾಯಾಲಯಕ್ಕೆ ಹೈಕೋರ್ಟ್‌ ಸೂಚನೆಯೊಂದನ್ನು ನೀಡಿ ಎಲ್ಲಾ ವಿಚಾರಣೆಗಳನ್ನು ಆರು ತಿಂಗಳುಗಳೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದೆ.

ಹೈಕೋರ್ಟ್‌ ಮುಂದೆ ಒಟ್ಟು ಐದು ಅರ್ಜಿಗಳಿದ್ದವು. ಮೂರು ಅರ್ಜಿಗಳನ್ನು ಜ್ಞಾನವಾಪಿ ಮಸೀದಿ ಸಮಿತಿ ಸಲ್ಲಿಸಿದ್ದರೆ ಎರಡು ಅರ್ಜಿಗಳನ್ನು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್‌ ವಕ್ಫ್‌ ಮಂಡಳಿ ಸಲ್ಲಿಸಿತ್ತು.

ಇವುಗಳಲ್ಲಿ ಮೂರು ಅರ್ಜಿಗಳು ವಾರಣಾಸಿ ನ್ಯಾಯಾಲಯದ ಮುಂದೆ 1991ರಲ್ಲಿ ಸಲ್ಲಿಸಿದ್ದ ಅರ್ಜಿಯ ಮಾನ್ಯತೆಯನ್ನು ಪ್ರಶ್ನಿಸಿತ್ತು.

1991ರಲ್ಲಿ ವಾರಣಾಸಿ ನ್ಯಾಯಾಲಯದ ಮುಂದೆ ಆದಿ ವಿಶ್ವೇಶ್ವರ ವಿರಾಜಮಾನ್‌ ದೇವರ ಪರವಾಗಿ ಸಲ್ಲಿಸಲಾಗಿತ್ತಲ್ಲದೆ ಮಸೀದಿ ಆವರಣದ ವಿವಾದಿತ ಸ್ಥಳದಲ್ಲಿ ಪ್ರಾರ್ಥನೆಗೆ ಅವಕಾಶ ಕೋರಿತ್ತು. ಇದನ್ನು ಪ್ರಶ್ನಿಸಿ ಅಂಜುಮಾನ್‌ ಇಂತೆಝಮಿಯಾ ಮಸ್ಜಿದ್‌ ಸಮಿತಿ ಹಾಗೂ ಉ.ಪ್ರ. ಸುನ್ನಿ ಸೆಂಟ್ರಲ್‌ ವಕ್ಫ್‌ ಮಂಡಳಿಯು ಅರ್ಜಿ ಸಲ್ಲಿಸಿ ಇದು ಪ್ರಾರ್ಥನಾ ಸ್ಥಳಗಳ (ವಿಶೇಷ ನಿಬಂಧನೆಗಳ) ಕಾಯಿದೆ 1991 ಅಡಿ ಮಾನ್ಯವಲ್ಲ. ಈ ಕಾಯಿದೆಯು ಆಗಸ್ಟ್‌ 15, 1947ರಲ್ಲಿದ್ದಂತೆ ಧಾರ್ಮಿಕ ಸ್ಥಳಗಳ ಸ್ವರೂಪ ಬದಲಾಯಿಸುವುದನ್ನು ನಿರ್ಬಂಧಿಸುತ್ತದೆ ಎಂದು ವಾದಿಸಿದ್ದವು.

1991ರ ಅರ್ಜಿದಾರರ ಪ್ರಕಾರ ಜ್ಞಾನವಾಪಿ ವಿವಾದವು ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಇದೆ ಆದ್ದರಿಂದ ಇದು ಪ್ರಾರ್ಥನಾ ಸ್ಥಳಗಳ ಕಾಯಿದೆಯ ವ್ಯಾಪ್ತಿಗೆ ಬರುವುದಿಲ್ಲ.

ಇಂದಿನ ತೀರ್ಪಿನಲ್ಲಿ ಜಸ್ಟಿಸ್‌ ರೋಹಿತ್‌ ರಂಜನ್‌ ಅಗರ್ವಾಲ್‌ ಅವರು 1991 ರ ಅರ್ಜಿಯಲ್ಲಿ ಅಮಾನ್ಯವಾದುದೇನೂ ಇಲ್ಲ ಎಂದು ಹೇಳಿದರು.

ಮಸೀದಿ ಕಂಪೌಂಡ್‌ ಮುಸ್ಲಿಂ ಸ್ವರೂಪ ಅಥವಾ ಹಿಂದೂ ಸ್ವರೂಪ ಹೊಂದಿರಬಹುದು, ಈ ವಿಚಾರ ದೇಶದ ಎರಡು ಪ್ರಮುಖ ಸಮುದಾಯಗಳನ್ನು ಬಾಧಿಸುತ್ತದೆ, ವಿಚಾರಣಾ ನ್ಯಾಯಾಲಯ ಆರು ತಿಂಗಳೊಳಗೆ ಈ ಪ್ರಕರಣ ಇತ್ಯರ್ಥಪಡಿಸಬೇಕು ಎಂದು ಹೈಕೋರ್ಟ್‌ ಹೇಳಿದೆ.

ಈಗಿನ ಮಸೀದಿ ಸ್ಥಳದಲ್ಲಿ ದೇವಸ್ಥಾನವಿತ್ತು ಎಂದು ವಾದಿಸಿ ವಾರಣಾಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News