ದಿಲ್ಲಿ: ಬಿಸಿಲಾಘಾತಕ್ಕೆ ಓರ್ವ ಬಲಿ
ಹೊಸದಿಲ್ಲಿ : ದಿಲ್ಲಿಯಲ್ಲಿ ಬಿಸಿಲಾಘಾತಕ್ಕೆ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ. ಬಿಸಿಲಾಘಾತಕ್ಕೆ ತುತ್ತಾಗಿದ್ದ 40 ವರ್ಷದ ಈ ವ್ಯಕ್ತಿಯನ್ನು ಸೋಮವಾರ ರಾತ್ರಿ ದಿಲ್ಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅವರು ಗುರುವಾರ ಅಪರಾಹ್ನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಬಿಹಾರದ ದರ್ಭಾಂಗ್ ಮೂಲದ ಈ ವ್ಯಕ್ತಿ ಯಾವುದೇ ಕೂಲರ್ ಅಥವಾ ಫ್ಯಾನ್ ಇಲ್ಲದೆ ಕೊಠಡಿಯೊಂದರಲ್ಲಿ ವಾಸಿಸುತ್ತಿದ್ದರು. ಅವರ ದೇಹದ ಉಷ್ಣಾಂಶ 107 ಡಿಗ್ರಿ ಫ್ಯಾರನ್‌ಹೀಟ್ ದಾಟಿತ್ತು. ಇದು ದೇಹದ ಸಹಜ ಉಷ್ಣಾಂಶಕ್ಕಿಂತ ಸುಮಾರು 10 ಡಿಗ್ರಿ ಫ್ಯಾರನ್‌ಹೀಟ್ ಅಧಿಕ ಎಂದು ಅವರಿಗೆ ಚಿಕಿತ್ಸೆ ನೀಡಿರುವ ವೈದ್ಯರು ತಿಳಿಸಿದ್ದಾರೆ.
ಅವರು ಆಸ್ಪತ್ರೆಯ ಉಷ್ಣಾಘಾತದ ಘಟಕದಲ್ಲಿ ಇದ್ದರು. ಅವರನ್ನು ಬುಧವಾರ ಬೆಳಗ್ಗೆ ವಾರ್ಡ್ ಗೆ ವರ್ಗಾಯಿಸಲಾಗಿತ್ತು. ಅನಂತರ ಅವರ ಆರೋಗ್ಯ ಸ್ಥಿತಿ ಇದ್ದಕ್ಕಿದ್ದಂತೆ ಹದಗೆಟ್ಟಿತು. ಅವರು ಅಪರಾಹ್ನ 3 ಗಂಟೆಗೆ ಮೃತಪಟ್ಟರು ಎಂದು ಅವರು ಹೇಳಿದ್ದಾರೆ.
ಈ ವ್ಯಕ್ತಿ ಇಲ್ಲಿ ಪೈಪ್ಲೈನ್ ಅಳವಡಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಉಷ್ಣಾಘಾತದಿಂದ ಅಸ್ವಸ್ಥರಾದ ಅವರನ್ನು ಗೆಳೆಯರು ಹಾಗೂ ಸಹೋದ್ಯೋಗಿಗಳು ಆಸ್ಪತ್ರೆಗೆ ಕರೆ ತಂದು ದಾಖಲಿಸಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.