ಕೇಂದ್ರದಿಂದ 3 ನೂತನ ಕ್ರಿಮಿನಲ್ ಕಾಯ್ದೆ ಜಾರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ ಡಿಎಂಕೆ
ಚೆನ್ನೈ : ಕೇಂದ್ರ ಸರಕಾರ ಜಾರಿಗೆ ತಂದ ಮೂರು ನೂತನ ಕ್ರಿಮಿನಲ್ ಕಾನೂನುಗಳು ಸಂವಿಧಾನ ವಿರೋಧಿ ಹಾಗೂ ಅಧಿಕಾರ ವ್ಯಾಪ್ತಿಯನ್ನು ಮೀರಿದುದು ಎಂದು ಘೋಷಿಸುವಂತೆ ಕೋರಿ ಡಿಎಂಕೆ ಶುಕ್ರವಾರ ಮದ್ರಾಸ್ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ.
ಮೂರು ಕಾನೂನುಗಳಾದ ಭಾರತೀಯ ನಾಗರಿಕ ಸುರಕ್ಷಾ ಸಂಹಿತ, ಭಾರತೀಯ ನ್ಯಾಯ ಸಂಹಿತ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ ಜುಲೈ 1ರಂದು ಜಾರಿಗೆ ಬಂದಿವೆ. ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ ಹಾಗೂ ಭಾರತೀಯ ಪುರಾವೆ ಕಾಯ್ದೆ ಬದಲಾಗಿ ಈ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ.
ಡಿಎಂಕೆಯ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್.ಎಸ್. ಸುಂದರ್ ಹಾಗೂ ಎನ್. ಸೆಂಥಿಲ್ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಅನಂತರ ಪೀಠ ಈ ಅರ್ಜಿಯ ಕುರಿತು ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ನೋಟಿಸು ಜಾರಿ ಮಾಡಿತು.
ಕೇಂದ್ರ ಸರಕಾರ ಸಂಸತ್ತಿನಲ್ಲಿ ಈ 3 ಮಸೂದೆಗಳನ್ನು ಮಂಡಿಸಿತು ಹಾಗೂ ಯಾವುದೇ ಅರ್ಥ ಪೂರ್ಣ ಚರ್ಚೆ ಇಲ್ಲದೆ ಅಂಗೀಕರಿಸಿತು ಎಂದು ಡಿಎಂಕೆ ಅರ್ಜಿಯಲ್ಲಿ ಆರೋಪಿಸಿದೆ.
ಯಾವುದೇ ಪ್ರಮುಖ ಬದಲಾವಣೆ ಇಲ್ಲದೆ, ಸೆಕ್ಷನ್ಗಳನ್ನು ಕೇವಲ ಅದಲು ಬದಲು ಮಾಡಲಾಗಿದೆ. ಇದು ನಿಯಮಗಳ ವ್ಯಾಖ್ಯಾನಕ್ಕೆ ಸಂಬಂಧಿಸಿ ಅನಾನುಕೂಲ ಹಾಗೂ ಗೊಂದಲಕ್ಕೆ ಕಾರಣವಾಗಿದೆ ಎಂದು ಅದು ಹೇಳಿದೆ.
ಸಂಸತ್ತಿನ ಒಂದು ಭಾಗ ಅಂದರೆ ಆಡಳಿತಾರೂಢ ಪಕ್ಷ ಹಾಗೂ ಅದರ ಮಿತ್ರ ಪಕ್ಷಗಳು ಮಾತ್ರ ಈ ಕಾನೂನಗಳನ್ನು ಅಂಗೀಕರಿಸಿವೆ. ವಿರೋಧ ಪಕ್ಷಗಳನ್ನು ಹೊರಗಿರಿಸಲಾಗಿದೆ ಎಂದು ಅದು ಪ್ರತಿಪಾದಿಸಿದೆ.
ಈ ಕಾಯ್ದೆಗಳಿಗೆ ಹಿಂದಿ/ಸಂಸ್ಕೃತದಲ್ಲಿ ಹೆಸರಿಸಿರುವುದು ಸಂವಿಧಾನದ ವಿಧಿ 348ರ ಉಲ್ಲಂಘನೆ ಎಂದು ಡಿಎಂಕೆ ಅರ್ಜಿಯಲ್ಲಿ ಹೇಳಿದೆ.