ಗರಿಷ್ಠ ತೆರಿಗೆ ಪಾವತಿಸುವ ಭಾರತೀಯ ಕ್ರಿಕೆಟ್ ಪಟು ಯಾರು ಗೊತ್ತೇ?
ಮುಂಬೈ: ಭಾರತೀಯ ಅಗ್ರಗಣ್ಯ ಕ್ರಿಕೆಟ್ ಪಟುಗಳು ವಿವಿಧ ಮೂಲಗಳಿಂದ ಗಳಿಸುವ ಆದಾಯದ ಬಗ್ಗೆ ಜನಸಾಮಾನ್ಯರಿಗೆ ಕುತೂಹಲ ಸಹಜ. ಭಾರತ 1983ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಬಳಿಕ ಭಾರತದಲ್ಲಿ ಅತಿಹೆಚ್ಚು ಮಂದಿ ಬೆಂಬಲಿಗರನ್ನು ಹೊಂದಿದ ಕ್ರೀಡೆ ಎಂಬ ಕೀರ್ತಿಗೆ ಕ್ರಿಕೆಟ್ ಪಾತ್ರವಾಗಿದೆ.
ಕ್ರಿಕೆಟ್ ಆಡಿದ್ದಕ್ಕೆ ಬರುವ ಸಂಭಾವನೆಯ ಜತೆಗೆ ಐಪಿಎಲ್, ವಿವಿಧ ಕಂಪನಿಗಳ ಜತೆಗಿನ ಜಾಹೀರಾತು ಒಪ್ಪಂದದ ಕಾರಣದಿಂದ ಆಟಗಾರರ ಮೌಲ್ಯ ಹಲವು ಪಟ್ಟು ಹೆಚ್ಚಿದೆ. ಕ್ರಿಕೆಟ್ನ ಅಗ್ರಗಣ್ಯ ತಾರೆಯರು ಅತ್ಯಧಿಕ ಜಾಹೀರಾತು ಆದಾಯ ಗಳಿಸುತ್ತಾರೆ. ಆದಾಯ ಹೆಚ್ಚಿದಷ್ಟೂ ಇವರು ಪಾವತಿಸುವ ತೆರಿಗೆ ಮೊತ್ತ ಕೂಡಾ ಹೆಚ್ಚುತ್ತಾ ಹೋಗುತ್ತದೆ.
ಫಾರ್ಚೂನ್ ಇಂಡಿಯಾ ವರದಿಯ ಪ್ರಕಾರ, ವಿರಾಟ್ ಕೊಹ್ಲಿ ಅತ್ಯಧಿಕ ತೆರಿಗೆ ಪಾವತಿಸುವ ಭಾರತೀಯ ಕ್ರಿಕೆಟ್ ಆಟಗಾರ ಎನಿಸಿದ್ದಾರೆ. ಜತೆಗೆ ಭಾರತದಲ್ಲಿ ಅತ್ಯಧಿಕ ತೆರಿಗೆ ಪಾವತಿಸುವ ಕ್ರೀಡಾಪಟು ಎಂಬ ಹೆಗ್ಗಳಿಕೆಯೂ ಅವರದ್ದು. ಸದ್ಯಕ್ಕೆ ವಿಹಾರಕ್ಕಾಗಿ ಕುಟುಂಬದ ಜತೆ ಲಂಡನ್ ಗೆ ತೆರಳಿರುವ ಕೊಹ್ಲಿ 66 ಕೋಟಿ ರೂಪಾಯಿ ತೆರಿಗೆಯನ್ನು 2023-24ನೇ ಹಣಕಾಸು ವರ್ಷಕ್ಕೆ ಪಾವತಿಸಿದ್ದಾರೆ. ಎಂ.ಎಸ್.ಧೋನಿ (38 ಕೋಟಿ), ಸಚಿನ್ ತೆಂಡೂಲ್ಕರ್ (28 ಕೋಟಿ) ಪಟ್ಟಿಯಲ್ಲಿ ನಂತರದ ಸ್ಥಾನಗಳಲ್ಲಿದ್ದಾರೆ. ಫಾರ್ಚೂನ್ ಇಂಡಿಯಾ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ ಸೌರಭ್ ಗಂಗೂಲಿ (23 ಕೋಟಿ) ಮತ್ತು ಹಾರ್ದಿಕ್ ಪಾಂಡ್ಯ (13 ಕೋಟಿ) ಅಗ್ರ ಐದು ಮಂದಿಯ ಪೈಕಿ ಸ್ಥಾನ ಪಡೆದ ಇತರರು. ಒಟ್ಟಾರೆ ಪಟ್ಟಿಯಲ್ಲಿ ಬಾಲಿವುಡ್ ಸೂಪರ್ಸ್ಟಾರ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಶಾರೂಕ್ ಖಾನ್ 92 ಕೋಟಿ ರೂಪಾಯಿಯೊಂದಿಗೆ ಅಗ್ರಸ್ಥಾನಿಯಾಗಿದ್ದಾರೆ.