ಹರ್ಯಾಣ | ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಜೆಜೆಪಿಯ ದುಶ್ಯಂತ್ ಚೌಟಾಲಾ
ಹಿಸ್ಸಾರ್: ಹರ್ಯಾಣದಲ್ಲಿ ಬಿಜೆಪಿ ಸರಕಾರಕ್ಕೆ ಮೂವರು ಪಕ್ಷೇತರ ಶಾಸಕರು ಬೆಂಬಲ ಹಿಂತೆಗೆದುಕೊಂಡ ಒಂದು ದಿನದ ಬಳಿಕ, JJP ನಾಯಕ ದುಶ್ಯಂತ್ ಚೌಟಾಲ ಅವರು, ನೈತಿಕ ಆಧಾರದ ಮೇಲೆ ಮುಖ್ಯಮಂತ್ರಿ ನಯಾಬ್ ಸೈನಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಮತ್ತು ಜನನಾಯಕ ಜನತಾ ಪಾರ್ಟಿ (ಜೆಜೆಪಿ) ನಾಯಕ ದುಶ್ಯಂತ್ ಚೌಟಾಲಾ ಅವರು ರಾಜ್ಯ ಸರಕಾರವನ್ನು ಉರುಳಿಸಲು ಪ್ರಯತ್ನಿಸಿದರೆ ಪ್ರತಿಪಕ್ಷ ನಾಯಕ ಭೂಪಿಂದರ್ ಸಿಂಗ್ ಹೂಡಾ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
“ಎಲ್ಲಾ 10 ಲೋಕಸಭಾ ಸ್ಥಾನಗಳು ಮತ್ತು ಕರ್ನಾಲ್ ಉಪಚುನಾವಣೆಯ ಒಂದು ಸ್ಥಾನವನ್ನು ಗೆಲ್ಲುವ ಬಗ್ಗೆ ಬಿಜೆಪಿ ಮಾತನಾಡುತ್ತಿದೆ. ಆದರೆ ಮೂವರು ಶಾಸಕರು ಬೆಂಬಲ ಹಿಂಪಡೆದಿರುವುದು ಬಿಜೆಪಿ ಎಷ್ಟು ದುರ್ಬಲವಾಗಿದೆ ಎಂಬುದನ್ನು ತೋರಿಸುತ್ತದೆ. ಇಂದಿನ ಅಂಕಿಅಂಶಗಳ ಪ್ರಕಾರ, ಚುನಾವಣೆಯ ಸಮಯದಲ್ಲಿ ಈ ಸರಕಾರವನ್ನು ಉರುಳಿಸಲು ಒಂದು ಹೆಜ್ಜೆ ಮುಂದಿಟ್ಟರೆ, ಹೂಡಾ ಅವರನ್ನು ಬಾಹ್ಯವಾಗಿ ಬೆಂಬಲಿಸುತ್ತೇನೆ ಎಂದು ನಾನು ವಿರೋಧ ಪಕ್ಷದ ನಾಯಕರಿಗೆ ಹೇಳಲು ಬಯಸುತ್ತೇನೆ. ಮೇ 25 ರಂದು ಹರ್ಯಾಣದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಕೆಲವು ದಿನಗಳಷ್ಟೇ ಬಾಕಿಯಿದೆ. ಅದಕ್ಕಿಂತ ಮುಂಚಿತವಾಗಿ ಬಿಜೆಪಿ ಸರಕಾರವನ್ನು ಉರುಳಿಸಲು ಕಾಂಗ್ರೆಸ್ ಹೆಜ್ಜೆ ಇಡುತ್ತದೆಯೇ” ಎಂದು ಚೌಟಾಲಾ ಹೇಳಿದ್ದಾರೆ.
“ಈಗಾಗಲೇ ಮೂವರು ಪಕ್ಷೇತರ ಶಾಸಕರು ಬೆಂಬಲ ಹಿಂಪಡೆದಿದ್ದಾರೆ. ಮನೋಹರ್ ಲಾಲ್ ಖಟ್ಟರ್ (ಕರ್ನಾಲ್‌ನಿಂದ ಲೋಕಸಭಾ ಅಭ್ಯರ್ಥಿ) ಮತ್ತು ರಂಜಿತ್ ಸಿಂಗ್ (ಹಿಸ್ಸಾರ್‌ನ ಅಭ್ಯರ್ಥಿ) ಸೇರಿದಂತೆ ಇಬ್ಬರು ಶಾಸಕರು ವಿಧಾನಸಭೆಗೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಐವರು ಶಾಸಕರು ವಿಧಾನಸಭೆಯಿಂದ ಹೊರಗುಳಿದಿದ್ದಾರೆ. ಬಿಜೆಪಿ ಸರಕಾರ ಸರಳ ಬಹುಮತ ಪಡೆಯುವಲ್ಲಿ ವಿಫಲವಾಗಿದೆ ಎಂಬುದು ಸಾಬೀತಾಗಿದೆ. ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತೇನೆ. ಮೂವರು ಪಕ್ಷೇತರರು ತಮ್ಮ ಬೆಂಬಲ ಹಿಂಪಡೆದಿರುವುದರ ಕುರಿತು ರಾಜ್ಯಪಾಲರಿಗೆ ಮಾಹಿತಿ ನೀಡಿದ್ದಾರೆ. ಬಹುಮತವನ್ನು ಸಾಬೀತುಪಡಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನಗಳನ್ನು ನೀಡುವಂತೆ ಲಿಖಿತವಾಗಿ ನಾವು ರಾಜ್ಯಪಾಲರನ್ನು ಒತ್ತಾಯಿಸುತ್ತೇವೆ” ಎಂದು ಚೌಟಾಲಾ ಹೇಳಿದರು.
ಶಾಸಕರಾದ ಧರಂಪಾಲ್ ಗೊಂಡೆರ್ (ನಿಲೋಖೇರಿ ಕ್ಷೇತ್ರ), ರಣಧೀರ್ ಗೋಲನ್ (ಪುಂಡ್ರಿ ಕ್ಷೇತ್ರ) ಮತ್ತು ಸೋಂಬೀರ್ ಸಾಂಗ್ವಾನ್ (ದಾದ್ರಿ ಕ್ಷೇತ್ರ) ಬೆಂಬಲ ಹಿಂತೆಗೆದುಕೊಳ್ಳುವುದರೊಂದಿಗೆ, 88 ಸದಸ್ಯ ಬಲಾಬಲದ ವಿಧಾನಸಭೆಯಲ್ಲಿ ಬಿಜೆಪಿಯ ಬಲವು 40ಕ್ಕೆ ಕುಸಿದಿದೆ. ಸರಳ ಬಹುಮತಕ್ಕೆ 45 ಸದಸ್ಯರ ಬೆಂಬಲ ಬೇಕಿದೆ.
2019 ರ ವಿಧಾನಸಭಾ ಚುನಾವಣೆಯಲ್ಲಿ ಜೆಜೆಪಿ 10 ಸ್ಥಾನಗಳನ್ನು ಮತ್ತು ಬಿಜೆಪಿ 40 ಸ್ಥಾನಗಳನ್ನು ಗೆದ್ದಿತ್ತು. ಎರಡೂ ಪಕ್ಷಗಳು ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಹರ್ಯಾಣದಲ್ಲಿ ಸಮ್ಮಿಶ್ರ ಸರಕಾರ ರಚಿಸಿದ್ದವು. ಎರಡು ತಿಂಗಳ ಹಿಂದೆ ಬಿಜೆಪಿ ಜೆಜೆಪಿ ಜೊತೆಗಿನ ಸಂಬಂಧವನ್ನು ಮುರಿದುಕೊಂಡಿತ್ತು.
ತಮ್ಮದೇ ಶಾಸಕರು ಪಕ್ಷ ತೊರೆದಿರುವ ಬಗ್ಗೆ ಮಾತನಾಡಿದ ಚೌಟಾಲಾ, ವಿಪ್‌ಗೆ ಸಾಕಷ್ಟು ಶಕ್ತಿ ಇದೆ. ವಿಪ್ ಜಾರಿಯಾಗುವವರೆಗೆ ಪಕ್ಷದ ಎಲ್ಲಾ ಶಾಸಕರು, ಅದರಂತೆ ಮತ ಚಲಾಯಿಸಬೇಕು. ಬೇರೆ ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಿದ್ದೇವೆ. ನಮ್ಮ ಮೂವರು ಶಾಸಕರಿಗೆ ನೋಟಿಸ್ ಜಾರಿ ಮಾಡಿದ್ದೇವೆ. ಈ ಮೂವರಲ್ಲಿ ಯಾರೊಬ್ಬರೂ ಜೆಜೆಪಿ ನೋಟಿಸ್‌ಗೆ ಉತ್ತರಿಸಿಲ್ಲ. ಅವರ ಉತ್ತರ ತೃಪ್ತಿಕರವಾಗಿಲ್ಲದಿದ್ದರೆ, ಅವರನ್ನು ಅನರ್ಹಗೊಳಿಸುವಂತೆ ನಾವು ಸ್ಪೀಕರ್‌ಗೆ ಪತ್ರ ಬರೆಯುತ್ತೇವೆ” ಎಂದರು.
ಆರು ತಿಂಗಳೊಳಗೆ ಸದನದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಾಧ್ಯವಿಲ್ಲ ಎಂಬ ಬಿಜೆಪಿ ಸಮರ್ಥನೆಗೆ ಪ್ರತಿಕ್ರಿಯಿಸಿದ ಚೌಟಾಲಾ, “ಸದನದಲ್ಲಿ ಮಂಡಿಸಲಾದ ಅವಿಶ್ವಾಸ ನಿರ್ಣಯವು ಹಿಂದಿನ ಸರಕಾರದ ಅಧಿಕಾರಾವಧಿಯಲ್ಲಿಯೇ ಕೊನೆಗೊಂಡ ಹಿಂದಿನ ಸರಕಾರದ ವಿರುದ್ಧವಾಗಿತ್ತು. ಈಗ ಹೊಸ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ ಹೊಸ ಅವಿಶ್ವಾಸ ನಿರ್ಣಯ ಮಂಡನೆ ಮಾಡಬಹುದು” ಎಂದರು.
ಸೌಜನ್ಯ : indianexpress.com