ಮುಂಚಿತವಾಗಿಯೇ ಲೋಕಸಭಾ ಚುನಾವಣೆ ಸಾಧ್ಯತೆ, ನಾವು ಸಿದ್ಧರಿದ್ದೇವೆ: ನಿತೀಶ್ ಕುಮಾರ್
ಪಾಟ್ನಾ: ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ಮುಂಚಿತವಾಗಿಯೇ ಲೋಕಸಭಾ ಚುನಾವಣೆಗಳನ್ನು ನಡೆಸಲು ಯೋಜಿಸುತ್ತಿದೆ ಎಂದು ಪ್ರತಿಪಾದಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, " ನಾವು ಯಾವ ಸಮಯದಲ್ಲಾದರೂ ಸಿದ್ಧರಿದ್ದೇವೆ" ಎಂದು ಸವಾಲು ಹಾಕಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ ವರ್ಷ ಬಿಜೆಪಿಯೊಂದಿಗಿನ ಸಖ್ಯವನ್ನು ಕಡಿದುಕೊಂಡು, ವಿರೋಧ ಪಕ್ಷಗಳ INDIA ಮೈತ್ರಿಕೂಟದ ರಚನೆಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿರುವ ನಿತೀಶ್ ಕುಮಾರ್, ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿವೆ ಎಂಬ ಅರೋಪಗಳನ್ನು ತಳ್ಳಿ ಹಾಕಿದ್ದಾರೆ. ವಿವಿಧ ಪಕ್ಷಗಳ INDIA ಮೈತ್ರಿಕೂಟವು ಒಗ್ಗಟ್ಟಾಗಿದೆ ಎಂದು ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
"ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ಮುಂಚಿತವಾಗಿಯೇ ಲೋಕಸಭಾ ಚುನಾವಣೆಗಳನ್ನು ನಡೆಸಲಿದೆ ಎಂದು ನಾನು ಹೇಳುತ್ತಲೇ ಬರುತ್ತಿದ್ದೇನೆ. ನಾವು ಯಾವ ಸಮಯದಲ್ಲಾದರೂ ಸಿದ್ಧರಿದ್ದೇವೆ. ಅವರು ಮುಂಚಿತವಾಗಿಯೇ ಚುನಾವಣೆ ನಡೆಸಲಿ" ಎಂದು ನಿತೀಶ್ ಕುಮಾರ್ ಸವಾಲು ಹಾಕಿದ್ದಾರೆ.