ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣ ಜಾರಿಗೊಳಿಸಿ ; ರಾಹುಲ್ ಗಾಂಧಿ ಆಗ್ರಹ
ಹೊಸದಿಲ್ಲಿ : ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಸೂದೆಯ ತ್ವರಿತ ಜಾರಿಗೆ ಕೇಂದ್ರ ಸರಕಾರ ಬಯಸುವುದಿಲ್ಲ. ಜಾತಿಗಣತಿಯ ಬೇಡಿಕೆಯಿಂದ ಗಮನವನ್ನು ಬೇರೆಡೆಗೆ ಸೆಳೆಯಲಷ್ಟೇ ಅದು ಈ ಮಸೂದೆಯನ್ನು ತಂದಿದೆ ಎಂದು ಹೇಳಿದರು.
‘ಮಹಿಳಾ ಮೀಸಲಾತಿ ಒಳ್ಳೆಯದು,ಆದರೆ ಮಸೂದೆ ಜಾರಿಗೆ ಮುನ್ನ ಜನಗಣತಿಯನ್ನು ನಡೆಸಬೇಕು ಮತ್ತು ನಂತರ ಕ್ಷೇತ್ರ ಮರುವಿಂಗಡಣೆಯನ್ನು ಕೈಗೊಳ್ಳಬೇಕು; ಹೀಗೆ ಎರಡು ಅಡಿ ಟಿಪ್ಪಣಿಗಳನ್ನು ಲಗತ್ತಿಸಲಾಗಿದೆʼ ಎಂದರು. ಮಸೂದೆ ಜಾರಿಗೆ ನಿರ್ದಿಷ್ಟ ಗಡುವನ್ನು ಸೂಚಿಸಿಲ್ಲ ಎಂದು ಬೆಟ್ಟು ಮಾಡಿದ ರಾಹುಲ್, ಮೀಸಲಾತಿಯು ಜಾರಿಗೊಳ್ಳುತ್ತದೆಯೇ ಎನ್ನುವುದೂ ಯಾರಿಗೂ ಗೊತ್ತಿಲ್ಲ. ಇದು ಒಬಿಸಿ ಗಣತಿಯಿಂದ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರವಾಗಿದೆ ಎಂದರು.
ಬಿಜೆಪಿ ಎರಡು ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಯಸಿದೆ. ಅದಾನಿ ವಿರುದ್ಧದ ಶೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಿದ ಆರೋಪ ಮತ್ತು ಜಾತಿಗಣತಿ. ಅವರು ಒಬಿಸಿಗಳಿಗೆ ನಿಜವಾದ ಅಧಿಕಾರವನ್ನು ನೀಡಲು ಬಯಸುತ್ತಿಲ್ಲ. ಬಿಜೆಪಿ ಅದಾನಿಯಲ್ಲಿ ಅಧಿಕಾರವನ್ನು ಕೇಂದ್ರೀಕರಿಸಿದೆ ಎಂದು ಅವರು ಹೇಳಿದರು.
ಭಾರತ ಸರಕಾರದ ಅತ್ಯಂತ ಪ್ರಮುಖ 90 ಕಾರ್ಯದರ್ಶಿಗಳಲ್ಲಿ ಕೇವಲ ಮೂವರು ಒಬಿಸಿಗಳಾಗಿದ್ದರೆ. ಒಬಿಸಿಗಳು ದೇಶದ ಜನಸಂಖ್ಯೆಯಲ್ಲಿ ಕೇವಲ ಶೇ.5ರಷ್ಟಿದ್ದಾರೆಯೇ? ಇದು ನಾವು ಬಯಸುತ್ತಿರುವ ಒಬಿಸಿಗಳ ಪಾಲ್ಗೊಳ್ಳುವಿಕೆಯೇ? ಹೀಗಾಗಿ ಒಬಿಸಿಗಳು ಎಷ್ಟಿದ್ದಾರೆ ಎನ್ನುವುದು ಪ್ರಶ್ನೆ. ಇದನ್ನು ತಿಳಿದುಕೊಳ್ಳಲು ಜಾತಿಗಣತಿ ಏಕೈಕ ಮಾರ್ಗವಾಗಿದೆ. ಬಿಜೆಪಿ ಕೆಲವೇ ಜನರ ಕೈಗೆ ಅಧಿಕಾರವನ್ನು ನೀಡಿದೆ ಎಂದು ಅವರು ಆರೋಪಿಸಿದರು.
ಸತ್ಯವೇನೆಂದರೆ ಮೀಸಲಾತಿಯನ್ನು ಇಂದು ಬೇಕಾದರೂ ಜಾರಿಗೊಳಿಸಬಹುದು. ಇದು ಜಟಿಲ ವಿಷಯವೇನಲ್ಲ. ಆದರೆ ಸರಕಾರವು ಅದನ್ನು ಬಯಸುತ್ತಿಲ್ಲ. ಸರಕಾರವು ಮಸೂದೆಯನ್ನು ದೇಶದ ಮುಂದೆ ಮಂಡಿಸಿದೆ. 10 ವರ್ಷಗಳ ಬಳಿಕ ಅದನ್ನು ಜಾರಿಗೊಳಿಸಲಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಯುಪಿಎ ಸರಕಾರವು 2010ರಲ್ಲಿ ತಂದಿದ್ದ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಬಿಸಿ ಕೋಟಾ ಒದಗಿಸದ್ದಕ್ಕೆ ವಿಷಾದವಿದೆ. ಇದನ್ನು ಆಗಲೇ ಮಾಡಬೇಕಿತ್ತು. ನಾವು ಇದನ್ನು ಮಾಡುತ್ತೇವೆ ’ ಎಂದು ಹೇಳಿದರು.
ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಜಾತಿಗಣತಿ :
ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ಒಬಿಸಿಗಳು ಹಾಗೂ ಎಸ್ಸಿ/ಎಸ್ಟಿಗಳ ನಿಜವಾದ ಪ್ರಾತಿನಿಧ್ಯವನ್ನು ನಿರ್ಧರಿಸಲು ಜಾತಿಗಣತಿಯನ್ನು ನಡೆಸಲಿದೆ ಎಂದು ರಾಹುಲ್ ಭರವಸೆ ನೀಡಿದರು. ಇದನ್ನು ಒಂದು ದಿನದಲ್ಲಿ ಮಾಡಲಾಗುವುದಿಲ್ಲ, ಆದರೆ ನಮ್ಮ ಉದ್ದೇಶವು ಸ್ಪಷ್ಟವಾಗಿದೆ ಎಂದರು.