ಪೊಲೀಸ್ ಕಸ್ಟಡಿಯಲ್ಲಿ ಕಿರುಕುಳ ಪ್ರಕರಣ | ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಖುಲಾಸೆ

Update: 2024-12-08 06:02 GMT

Photo : facebook.com

ಪೋರ್‌ ಬಂದರ್‌ : ಪ್ರಾಸಿಕ್ಯೂಷನ್ ಸಂಶಯಾತೀತವಾಗಿ ಪ್ರಕರಣವನ್ನು ಸಾಬೀತು ಪಡಿಸಲು ವಿಫಲಗೊಂಡಿದೆ ಎಂದು ಅಭಿಪ್ರಾಯ ಪಟ್ಟಿರುವ ಗುಜರಾತ್ ನ ಪೋರ್‌ ಬಂದರ್‌ ನ್ಯಾಯಾಲಯವೊಂದು, 1997ರ ಕಸ್ಟಡಿ ಕಿರುಕುಳ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ರನ್ನು ಖುಲಾಸೆಗೊಳಿಸಿದೆ.

ತಪ್ಪೊಪ್ಪಿಗೆ ಪಡೆಯಲು ತೀವ್ರ ಹಲ್ಲೆ ನಡೆಸಿದ ಆರೋಪ ಹಾಗೂ ಇನ್ನಿತರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಡಿ ಅಂದಿನ ಪೋರ್‌ ಬಂದರ್‌ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಂಜೀವ್ ಭಟ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಸೂಕ್ತ ಪುರಾವೆಯ ಕೊರತೆಯಿದೆ ಎಂದು ಅಭಿಪ್ರಾಯ ಪಟ್ಟ ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಕೇಶ್ ಪಾಂಡ್ಯ, ಶನಿವಾರ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದರು.

ಇದಕ್ಕೂ ಮುನ್ನ, 1990ರಲ್ಲಿ ಜಾಮ್ ನಗರದಲ್ಲಿ ನಡೆದಿದ್ದ ಕಸ್ಟಡಿ ಸಾವು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಹಾಗೂ 1996ರಲ್ಲಿ ಪಲನ್ ಪುರ್ ನಲ್ಲಿ ರಾಜಸ್ಥಾನದ ವಕೀಲರೊಬ್ಬರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಮಾದಕ ದ್ರವ್ಯ ಇಟ್ಟ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಸಂಜೀವ್ ಭಟ್ ಗುರಿಯಾಗಿದ್ದಾರೆ. ಅವರನ್ನೀಗ ರಾಜ್ ಕೋಟ್ ನ ಕೇಂದ್ರ ಕಾರಾಗೃಹದಲ್ಲಿಡಲಾಗಿದೆ.

ದೂರುದಾರರು ಅಪರಾಧ ಒಪ್ಪಿಕೊಳ್ಳುವಂತೆ ಬಲವಂತಪಡಿಸಲಾಗಿದೆ. ಅಪಾಯಕಾರಿ ಆಯುಧಗಳು ಮತ್ತು ಬೆದರಿಕೆಯಿಂದ ಘಾಸಿಗೊಳಿಸಲಾಗಿದೆ ಎಂಬ ಆರೋಪವನ್ನು ಪ್ರಾಸಿಕ್ಯೂಷನ್ ಸಂಶಯಾತೀತವಾಗಿ ಸಾಬೀತು ಪಡಿಸಲು ವಿಫಲಗೊಂಡಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತು.

ಪ್ರಕರಣ ದಾಖಲಾದಾಗ ಸಾರ್ವಜನಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಪಿಯನ್ನು ವಿಚಾರಣೆಗೊಳಪಡಿಸಲು ಅಗತ್ಯವಿದ್ದ ಅನುಮತಿಯನ್ನು ಪಡೆಯಲಾಗಿಲ್ಲ ಎಂದೂ ನ್ಯಾಯಾಲಯ ಹೇಳಿತು.

ಟಾಡಾ ಕಾಯ್ದೆ ಹಾಗೂ ಶಸ್ತ್ರಾಸ್ತಗಳ ಕಾಯ್ದೆಯಡಿ ಪೊಲೀಸ್ ಕಸ್ಟಡಿಯಲ್ಲಿದ್ದ ನನ್ನಿಂದ ತಪ್ಪೊಪ್ಪಿಗೆ ಪಡೆಯಲು ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ನರನ್ ಜಾಧವ್ ಎಂಬ ವ್ಯಕ್ತಿ ನೀಡಿದ್ದ ದೂರನ್ನು ಆಧರಿಸಿ, ಅವರು ಮೃತಪಟ್ಟ ನಂತರ ಸಂಜೀವ್ ಭಟ್ ಹಾಗೂ ಪೊಲೀಸ್ ಪೇದೆ ವಜುಭಾಯಿ ಚೌ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 330 ಹಾಗೂ 324ರ ಅಡಿ ಪ್ರಕರಣ ದಾಖಲಾಗಿತ್ತು.

ಜುಲೈ 6, 1997ರಲ್ಲಿ ನರನ್ ಜಾಧವ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವೊಂದಕ್ಕೆ ನೀಡಿದ್ದ ದೂರಿನ ಆಧಾರದಲ್ಲಿ ನ್ಯಾಯಾಲಯ ನೀಡಿದ್ದ ನಿರ್ದೇಶನದನ್ವಯ, ಎಪ್ರಿಲ್ 15, 2013ರಲ್ಲಿ ಪೋರ್‌ ಬಂದರ್‌ ನಗರ ಬಿ-ವಲಯ ಠಾಣೆಯ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದರು.

1994ರ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿನ 22 ಆರೋಪಿಗಳ ಪೈಕಿ ಜಾಧವ್ ಕೂಡಾ ಒಬ್ಬರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News