ಢಾಕಾದಲ್ಲಿ ಭೀಕರ ಅಗ್ನಿ ದುರಂತ: 44 ಮಂದಿ ಸಜೀವ ದಹನ
ಢಾಕಾ: ಬಾಂಗ್ಲಾದೇಶದ ರಾಜಧಾನಿಯ ಏಳು ಮಹಡಿಯ ಕಟ್ಟಡದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 44 ಮಂದಿ ಸಜೀವ ದಹನವಾಗಿದ್ದಾರೆ.
ಬೈಲಿ ರಸ್ತೆಯ ಜನಪ್ರಿಯ ಬಿರಿಯಾನಿ ರೆಸ್ಟೋರೆಂಟ್ ನಲ್ಲಿ ಈ ಬೆಂಕಿ ದುರಂತ ರಾತ್ರಿ 9.50ರ ಸುಮಾರಿಗೆ ಸಂಭವಿಸಿದ್ದು, ಮೇಲಿನ ಮಹಡಿಗಳಿಗೆ ಕಾಳ್ಗಿಚ್ಚಿನಂತೆ ಹಬ್ಬಿತು. ಅಸಂಖ್ಯಾತ ಮಂದಿ ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿಕೊಂಡರು. ಎರಡು ಗಂಟೆಯ ಒಳಗೆ ಬೆಂಕಿಯನ್ನು ತಹಬಂದಿಗೆ ತರಲಾಗಿದೆ. ಕಟ್ಟಡಗಳಲ್ಲಿ ಸಿಕ್ಕಿಹಾಕಿಕೊಂಡ 75 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿ ಮೊಹ್ಮದ್ ಶಿಹಾಬ್ ಹೇಳಿದ್ದಾರೆ.
ಬೈಲಿ ರಸ್ತೆಯ ಕಟ್ಟಡಗಳಲ್ಲಿ ಪ್ರಮುಖವಾಗಿ ರೆಸ್ಟೋರೆಂಟ್ ಗಳು, ಬಟ್ಟೆ ಅಂಗಡಿಗಳು ಮತ್ತು ಮೊಬೈಲ್ ಶಾಪ್ ಗಳಿವೆ. ಕೆಲವರು ಆರನೇ ಮಹಡಿಯಿಂದ ಕೆಳಕ್ಕೆ ಇಳಿಯಲು ನೀರಿನ ಪೈಪ್ ಗಳನ್ನು ಬಳಸಿದ್ದು, ಈ ವೇಳೆ ಗಾಯಗಳಾಗಿವೆ. ಇತರ ಹಲವು ಮಂದಿ ಮೇಲ್ಚಾವಣಿಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ನೆರವಿಗಾಗಿ ಮೊರೆ ಇಡುವ ದೃಶ್ಯ ಕಂಡುಬಂದಿತ್ತು.
ಬಹುತೇಕ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಢಾಕಾ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ ಆರೋಗ್ಯ ಸಚಿವ ಸಮಂತ ಲಾಲ್ ಸೇನ್, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಸುಮಾರು 40 ಮಂದಿ ಗಾಯಾಳುಗಳು ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಾರ್ಟ್ಮೆಂಟ್ ಗಳಲ್ಲಿ ಮತ್ತು ಫ್ಯಾಕ್ಟರಿಗಳಲ್ಲಿ ಸುರಕ್ಷತಾ ಕ್ರಮಗಳ ಜಾರಿಯಲ್ಲಿ ಅಧಿಕಾರಿಗಳ ಉದಾಸೀನದಿಂದಾಗಿ ಬೆಂಕಿ ದುರಂತಗಳು ಬಾಂಗ್ಲಾದಲ್ಲಿ ಸಂಭವಿಸುತ್ತಲೇ ಇವೆ. 2021ರ ಜುಲೈನಲ್ಲಿ ಆಹಾರ ಸಂಸ್ಕರಣಾ ಘಟಕದಲ್ಲಿ ನಡೆದ ದುರಂತದಲ್ಲಿ 52 ಮಂದಿ ಬಲಿಯಾಗಿದ್ದರು. 2019ರ ಫೆಬ್ರುವರಿಯಲ್ಲಿ ಸಂಭವಿಸಿದ್ದ ಇಂಥದ್ದೇ ದುರಂತದಲ್ಲಿ 70 ಮಂದಿ ಜೀವ ಕಳೆದುಕೊಂಡಿದ್ದರು.