ಗುರುಗ್ರಾಮ | ರೆಸ್ಟೋರೆಂಟ್‌ನಲ್ಲಿ ಡ್ರೈ ಐಸ್ ಬೆರೆಸಿದ್ದ ಮೌತ್ ಫ್ರೆಶ್ನರ್ ಸೇವಿಸಿ ಐವರು ಅಸ್ವಸ್ಥ ; ಎಫ್‌ಐಆರ್ ದಾಖಲು

Update: 2024-03-04 18:01 GMT

Photo : videograb

ಗುರುಗ್ರಾಮ : ಇಲ್ಲಿನ ರೆಸ್ಟೋರೆಂಟ್ ಒಂದರಲ್ಲಿ ರಾತ್ರಿ ಊಟದ ಬಳಿಕ ಡ್ರೈ ಐಸ್‌ ಬೆರೆಸಿದ್ದ ಮೌತ್‌ ಫ್ರೆಶ್ನರ್‌ ಸೇವಿಸಿ ಐವರು ಅಸ್ವಸ್ಥಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಸ್ವಸ್ಥರಾರ ಐವರ ಪೈಕಿ ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳದು ಬಂದಿದೆ. ಗ್ರೇಟರ್ ನೋಯ್ಡಾ ನಿವಾಸಿ ಅಂಕಿತ್ ಕುಮಾರ್ ನೀಡಿದ ದೂರಿನ ಪ್ರಕಾರ, ಶನಿವಾರ ರಾತ್ರಿ ಊಟಕ್ಕೆ ಪತ್ನಿ ಹಾಗೂ ನಾಲ್ವರು ಸ್ನೇಹಿತರೊಂದಿಗೆ ಇಲ್ಲಿನ ಸೆಕ್ಟರ್ 90ರ ರೆಸ್ಟೋರೆಂಟ್‌ವೊಂದಕ್ಕೆ ತೆರಳಿದ್ದರು.

ಭೋಜನದ ನಂತರ, ರೆಸ್ಟೋರೆಂಟ್‌ನಲ್ಲಿನ ಮಾಣಿಯೊಬ್ಬರು ಮೌತ್ ಫ್ರೆಶ್ನರ್ ಅನ್ನು ತಂದರು. ಗುಂಪಿನಲ್ಲಿರುವ ಐದು ಜನರು ಅದನ್ನು ಸೇವಿಸಿದರು. ತಕ್ಷಣವೇ ಅವರ ಆರೋಗ್ಯ ಹದಗೆಟ್ಟಿತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದನ್ನು ಕಂಡ ರೆಸ್ಟೋರೆಂಟ್ ಸಿಬ್ಬಂದಿ ಪರಾರಿಯಾದರು ಎಂದು ಅಂಕಿತ್ ಕುಮಾರ್ ಹೇಳಿದರು.

"ನಾನು ಮೌತ್ ಫ್ರೆಶ್ನರ್ ಪ್ಯಾಕೆಟ್ ಅನ್ನು ವೈದ್ಯರಿಗೆ ತೋರಿಸಿದೆ. ಅವರು ಇದು ಡ್ರೈ ಐಸ್ ಎಂದು ಹೇಳಿದರು. ವೈದ್ಯರ ಪ್ರಕಾರ, ಡ್ರೈ ಐಸ್ ಸೇವನೆ ಸಾವಿಗೆ ಕಾರಣವಾಗಬಹುದು" ಎಂದು ದೂರುದಾರರು ಹೇಳಿದ್ದಾರೆ.

ಕುಮಾರ್ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೌತ್ ಫ್ರೆಶ್ನರ್ ಸೇವಿಸಿದ ನಂತರ, ಐವರಿಗೆ ತಮ್ಮ ಬಾಯಿಯಲ್ಲಿ ಸುಡುವ ಅನುಭವವಾಗಿದೆ ಎಂದು ದೂರಿದರು. ಅವರ ಬಾಯಿಯಿಂದ ರಕ್ತ ಬರಲಾರಂಭಿಸಿತು ಮತ್ತು ವಾಂತಿಯಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತಂತೆ ರವಿವಾರ ಖೇರ್ಕಿ ದೌಲಾ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 328 (ವಿಷದಿಂದ ನೋವುಂಟುಮಾಡುವುದು) ಮತ್ತು 120-ಬಿ (ಅಪರಾಧ ಪಿತೂರಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ತನಿಖೆ ನಡೆಸುತ್ತಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಠಾಣಾಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ.

ಏನಿದು ಡ್ರೈ ಐಸ್?

ಡ್ರೈ ಐಸ್ ಇಂಗಾಲದ ಡೈಆಕ್ಸೈಡ್ ನ ಘನ ರೂಪವಾಗಿದೆ. ಇದು ಹಿಮದಂತಹ ವಸ್ತುವಾಗಿದ್ದು, ಅದು ಕರಗದೆ ನೇರವಾಗಿ −78.5 °C (−109.3 °F) ನಲ್ಲಿ ಆವಿಯಾಗಿ ಬದಲಾಗುತ್ತದೆ.

ಡ್ರೈ ಐಸ್ ತಿಂದರೆ ಬಾಯಿ, ಅನ್ನನಾಳ ಮತ್ತು ಹೊಟ್ಟೆ ಸುಡಬಹುದು. ಇದು ಹೊಟ್ಟೆಯೊಳಗೆ ಹೋದಾಗ ಪ್ರಾಣಕ್ಕೆ ಸಂಚಕಾರ ಉಂಟಾಗಬಹುದು. ಡ್ರೈ ಐಸ್ ಇರುವ ಯಾವುದೇ ಉತ್ಪನ್ನಗಳನ್ನು ತಿನ್ನುವುದು ಅಥವಾ ಕುಡಿಯುವುದು ಅಪಾಯ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News