ಮಣಿಪುರ ಹಿಂಸಾಚಾರದಲ್ಲಿ ಮತ್ತೆ ನಾಲ್ಕು ಮಂದಿ ಮೃತ್ಯು

Update: 2024-01-19 02:26 GMT

Photo: PTI 

ಹೊಸದಿಲ್ಲಿ: ಹಿಂಸಾಪೀಡಿತ ಈಶಾನ್ಯ ರಾಜ್ಯವಾದ ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಗುರುವಾರ ಸಂಜೆ ಸಂಭವಿಸಿದ ಜನಾಂಗೀಯ ಹಿಂಸಾಚಾರದಲ್ಲಿ ಮತ್ತೆ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ನಿಂಗ್‍ತೋಕಾಂಗ್ ಖಾ ಖುನೊ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಒಬ್ಬ ಮಧ್ಯವಯಸ್ಕ ವ್ಯಕ್ತಿ ಹಾಗೂ ಆತನ ತಂದೆ ಸೇರಿದಂತೆ ನಾಲ್ವರು ಜೀವ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅಧಿಕಾರಿಗಳು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

"ಕೃಷಿಕರು ತಮ್ಮ ಹೊದಲ್ಲಿ ಕೆಲಸ ಮಾಡುತ್ತಿದ್ದಾಗ ಆಗಮಿಸಿದ ಐದರಿಂದ ಆರು ಮಂದಿ ಸಶಸ್ತ್ರ ದಾಳಿಕೋರರು, ತೀರಾ ಸನಿಹದಿಂದ ದಾಳಿ ನಡೆಸಿದ್ದಾರೆ" ಎಂದು ಘಟನೆಯಲ್ಲಿ ತಪ್ಪಿಸಿಕೊಂಡ ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಈ ಘಟನೆಯ ಬಳಿಕ ದಾಳಿಕೋರರು ಪಕ್ಕದ ಬೆಟ್ಟ ಪ್ರದೇಶಕ್ಕೆ ವಾಪಸ್ಸಾದರು ಎಂದು ತಿಳಿದು ಬಂದಿದೆ.

ಈ ಘಟನೆಯಿಂದಾಗಿ ಕಳೆದ ಎರಡು ದಿನಗಳಲ್ಲಿ ಹಿಂಸೆಗೆ ಬಲಿಯಾದವರ ಸಂಖ್ಯೆ 7ಕ್ಕೇರಿದೆ. ಇಬ್ಬರು ಪೊಲೀಸರು ಸೇರಿದಂತೆ ಒಟ್ಟು ಮೂರು ಮಂದಿ ಬುಧವಾರ ಹಿಂಸಾಚಾರದಲ್ಲಿ ಮೃತಪಟ್ಟಿದ್ದರು. ಕಳೆದ ಮೇ ತಿಂಗಳಿಂದೀಚೆಗೆ ಹಿಂಸಾಕೃತ್ಯಗಳು ನಡೆಯುತ್ತಿರುವ ರಾಜ್ಯದಲ್ಲಿ ಜನಾಂಗೀಯ ಸಂಘರ್ಷಕ್ಕೆ ಬಲಿಯಾದವರ ಸಂಖ್ಯೆ 180ಕ್ಕೇರಿದೆ.

ಮೀಟಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬೇಕು ಎಂಬ ಆಗ್ರಹದ ವಿರುದ್ಧ ಬೆಟ್ಟ ಜಿಲ್ಲೆಗಳು ಮೇ 3ರಂದು ನಡೆಸಿದ "ಟ್ರೈಬಲ್ ಸಾಲಿಡಾರಿಟಿ ಮಾರ್ಚ್" ಬಳಿಕ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಮಣಿಪುರ ಜನಸಂಖ್ಯೆಯ ಶೇಕಡ 53ರಷ್ಟಿರುವ ಮೀಟಿ ಜನಸಂಖ್ಯೆ ಪ್ರಮುಖವಾಗಿ ಇಂಫಾಲ ಕಣಿವೆಯಲ್ಲಿ ವಾಸವಿದೆ. ಇದಕ್ಕೆ ವಿರುದ್ಧವಾಗಿ ನಾಗಾ ಹಾಗೂ ಕುಕಿ ಸಮುದಾಯದವರು ಶೇಕಡ 40ರಷ್ಟಿದ್ದು, ಬೆಟ್ಟ ಪ್ರದೇಶಗಳಲ್ಲಿ ವಾಸವಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News