ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ನಾಲ್ವರು ಶಂಕಿತ ಐಸಿಸ್ ಉಗ್ರರ ಬಂಧನ | ಬಂಧಿತರೆಲ್ಲರೂ ಶ್ರೀಲಂಕಾ ಪ್ರಜೆಗಳು
ಅಹ್ಮದಾಬಾದ್: ಐಸಿಸ್ ಗೆ ಸೇರಿದ ನಾಲ್ವರು ಶಂಕಿತ ಉಗ್ರರನ್ನು ಸೋಮವಾರ ಗುಜರಾತ್ ನ ಅಹ್ಮದಾಬಾದ್ ವಿಮಾನನಿಲ್ದಾಣದಲ್ಲಿ ಬಂಧಿಸಲಾಗಿದೆ. ಬಂಧಿತರೆಲ್ಲರೂ ಶ್ರೀಲಂಕಾ ಪ್ರಜೆಗಳೆಂದು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಸೋಮವಾರ ತಿಳಿಸಿದೆ.
ಗುಜರಾತ್ ಎಟಿಎಸ್ ಅಧಿಕಾರಿಗಳು ಬಂಧಿತರೆಲ್ಲರನ್ನೂ ತೀವ್ರ ವಿಚಾರಣೆಗಾಗಿ ಅಜ್ಞಾತ ಸ್ಥಳಕ್ಕೆ ಕೊಂಡೊಯ್ದಿದೆ. ಅಹ್ಮದಾಬಾದ್ ವಿಮಾನನಿಲ್ದಾಣದಲ್ಲಿ ಅವರ ಉಪಸ್ಥಿತಿಯ ಹಿಂದಿನ ಉದ್ದೇಶವೇನೆಂಬುದು ವಿಚಾರಣೆಯಿಂದ ತಿಳಿದುಬರಬೇಕಿದೆ ಎಂದು ಮೂಲಗಳು ತಿಳಿಸಿವೆ.
ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಸುತ್ತಿನ ಪಂದ್ಯಗಳನ್ನು ಆಡಲು ಭಾರತೀಯ ಪ್ರೀಮಿಯರ್ ಲೀಗ್ (ಐಪಿಎಲ್)ನ ಮೂರು ತಂಡಗಳ ಆಗಮನಕ್ಕೆ ಮುನ್ನ ಅಹ್ಮದಾಬಾದ್ ವಿಮಾನನಿಲ್ದಾಣದಲ್ಲಿ ಶಂಕಿತರ ಬಂಧನವಾಗಿದೆ.
ಈ ವರ್ಷದ ಮಾರ್ಚ್ ನಲ್ಲಿ ಬಾಂಗ್ಲಾ ಗಡಿಯನ್ನು ದಾಟಿ ಭಾರತ ಪ್ರವೇಶಿಸಿದ್ದ ಇಬ್ಬರು ಶಂಕಿತ ಐಸಿಸ್ ಉಗ್ರರನ್ನು ಅಂತಾರಾಷ್ಟ್ರೀಯ ಗಡಿಯಲ್ಲಿ ಬಂಧಿಸಲಾಯಿತು. ಕಳೆದ ವರ್ಷದ ಡಿಸೆಂಬರ್ನಲ್ಲಿ ರಾಷ್ಟ್ರೀಯ ತನಿಖಾ ಏಜೆನ್ಸಿಯು (ಎನ್ಐಎ) ಮಹಾರಾಷ್ಟ್ರ ಹಾಗೂ ಕರ್ನಾಟಕದ 44 ಸ್ಥಳಗಳಲ್ಲಿ ನಡೆಸಿದ ದಾಳಿಗಳಲ್ಲಿ ಐಸಿಸ್ ನ 15 ಮಂದಿ ಸದಸ್ಯರನ್ನು ಬಂಧಿಸಿತ್ತು.