ಗೇಮಿಂಗ್ ಆ್ಯಪ್ ಪ್ರಕರಣ: ರಣಬೀರ್ ಕಪೂರ್ ಗೆ ಸಮನ್ಸ್ ಜಾರಿ

Update: 2023-10-04 14:06 GMT

ರಣಬೀರ್ ಕಪೂರ್ | PHOTO: NDTV 

ಹೊಸದಿಲ್ಲಿ: ಆನ್ ಲೈನ್ ಗೇಮಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ರಣಬೀರ್ ಕಪೂರ್ ಗೆ ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿಗೊಳಿಸಿದೆ. ಅವರು ಜಾರಿ ನಿರ್ದೇಶನಾಲಯದ ಮುಂದೆ ಶುಕ್ರವಾರ ಹಾಜರಾಗಬೇಕಿದೆ ಎಂದು ndtv.com ವರದಿ ಮಾಡಿದೆ.

ಮಹಾದೇವ್ ಆನ್ ಲೈನ್ ಬುಕ್ ಆ್ಯಪ್ ನ ಪ್ರಚಾರ ಜಾಹೀರಾತಿನಲ್ಲಿ ರಣಬೀರ್ ಕಪೂರ್ ಕಾಣಿಸಿಕೊಂಡಿದ್ದರು. ಇದಕ್ಕಾಗಿ ನಟನಿಗೆ ದೊಡ್ಡ ಮೊತ್ತದ ಸಂಭಾವನೆಯನ್ನು ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯವು ಆರೋಪಿಸಿದೆ.

ರಣಬೀರ್ ಕಪೂರ್ ಮಾತ್ರವಲ್ಲದೆ, ಬಾಲಿವುಡ್ ಮತ್ತು ಟಾಲಿವುಡ್ ನ ಮತ್ತೆ ಹನ್ನೆರಡು ನಟರು ಜಾರಿ ನಿರ್ದೇಶನಾಲಯದ ಕಣ್ಗಾವಲಿನಲ್ಲಿದ್ದಾರೆ. ಇದಲ್ಲದೆ ಕನಿಷ್ಠ ಪಕ್ಷ 100 ಮಂದಿ ಪ್ರಭಾವಿಗಳೂ ಕೂಡಾ ಜಾರಿ ನಿರ್ದೇಶನಾಲಯದ ಕಣ್ಗಾವಲಿನಲ್ಲಿದ್ದು, ಈ ಎಲ್ಲರಿಗೂ ತನಿಖೆಯ ಭಾಗವಾಗಿ ಸಮನ್ಸ್ ಜಾರಿಯಾಗುವ ಸಾಧ್ಯತೆ ಇದೆ.

ಕಂಪನಿಯ ಮುಖ್ಯಸ್ಥರಾದ ಸೌರಭ್ ಚಂದ್ರಾಕರ್ ಹಾಗೂ ರವಿ ಉಪ್ಪಲ್ ಛತ್ತೀಸ್ ಗಢದ ಭಿಲಾಯಿ ಮೂಲದವರಾಗಿದ್ದರೂ, ಈ ಆ್ಯಪ್ ಕಂಪನಿಯ ಕೇಂದ್ರ ಕಚೇರಿಯಿರುವ ಯುಎಇಯಿಂದ ಕಾರ್ಯಾಚರಣೆ ನಡೆಸುತ್ತಿದೆ. ಈ ಕಂಪನಿಯು ಶ್ರೀಲಂಕಾ, ನೇಪಾಳ ಹಾಗೂ ಯುಎಇಯಲ್ಲಿ ಕಾಲ್ ಸೆಂಟರ್ ಗಳನ್ನು ಹೊಂದಿದೆ.

ಮಹಾದೇವ್ ಆ್ಯಪ್ ಅಂಬ್ರೆಲಾ ಸಿಂಡಿಕೇಟ್ ನ ಭಾಗವಾಗಿದ್ದು, ಹೊಸ ಬಳಕೆದಾರರ ನೋಂದಣಿ, ಬಳಕೆದಾರರ ಐಡಿ ಸೃಷ್ಟಿ ಹಾಗೂ ಬೇನಾಮಿ ಬ್ಯಾಂಕ್ ಖಾತೆಗಳನ್ನು ಹೊಂದಿರುವ ಹಲವಾರು ಅಂತರ್ಜಾಲ ತಾಣಗಳ ಮೂಲಕ ಅಕ್ರಮ ಬೆಟ್ಟಿಂಗ್ ಅಂತರ್ಜಾಲ ತಾಣಗಳನ್ನು ವ್ಯವಸ್ಥೆಗೊಳಿಸುವ ಆನ್ ಲೈನ್ ವೇದಿಕೆಯಾಗಿದೆ ಎಂದು ಜಾರಿ ನಿರ್ದೇಶನಾಲಯವು ಆರೋಪಿಸಿದೆ.

ಈ ಕಂಪನಿಯ ಪ್ರವರ್ತಕರು ಇಂತಹ 4-5 ಆ್ಯಪ್ ಗಳನ್ನು ನಡೆಸುತ್ತಿದ್ದು, ಈ ಆ್ಯಪ್ ಗಳು ಪ್ರತಿದಿನ ರೂ. 200 ಕೋಟಿ ಲಾಭವನ್ನು ಗಳಿಸುತ್ತಿವೆ.

ಕಳೆದ ತಿಂಗಳು ಜಾರಿ ನಿರ್ದೇಶನಾಲಯವು ಮಹಾದೇವ್ ಆ್ಯಪ್ ನೊಂದಿಗೆ ಸಂಪರ್ಕ ಹೊಂದಿರುವ ಅಕ್ರಮ ಹಣ ವರ್ಗಾವಣೆ ಜಾಲಗಳ ವಿರುದ್ಧ ಕೋಲ್ಕತ್ತಾ, ಭೋಪಾಲ್ ಹಾಗೂ ಮುಂಬೈ ಸೇರಿದಂತೆ ಹಲವಾರು ಸ್ಥಳಗಳ ಶೋಧನೆ ನಡೆಸಿ, ದೋಷಾರೋಪಣೆಗೆ ಅಗತ್ಯವಾದ ಸಾಕ್ಷ್ಯಗಳನ್ನು ಹೊರ ತೆಗೆದಿತ್ತು. ಇದಲ್ಲದೆ ಅಪರಾಧ ಪ್ರಕ್ರಿಯೆಗೆ ಸಂಬಂಧಿಸಿದ ರೂ. 417 ಕೋಟಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

ಈ ಕುರಿತು ಕಳೆದ ತಿಂಗಳು ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದ ಜಾರಿ ನಿರ್ದೇಶನಾಲಯವು, “ಚಂದ್ರಾಕರ್ ಹಾಗೂ ಉಪ್ಪಲ್ ಯುಎಇಯಲ್ಲಿ ತಮ್ಮದೇ ಆದ ಸಾಮ್ರಾಜ್ಯವನ್ನು ಸ್ಥಾಪಿಸಿದ್ದು, ತಮ್ಮ ಅಕ್ರಮ ಸಂಪತ್ತಿನ ಕುರಿತು ಸಾಕ್ಷ್ಯಾಧಾರಗಳನ್ನು ಒದಗಿಸುತ್ತಿದ್ದಾರೆ ಎಂದು ಹೇಳಿತ್ತು.

ಕಳೆದ ಫೆಬ್ರವರಿ ತಿಂಗಳಲ್ಲಿ ಯುಎಇ ನಗರವಾದ ರಾಸ್ ಆಲ್ ಖೈಮಾದಲ್ಲಿ ವಿವಾಹವಾಗಿರುವ ಚಂದ್ರಾಕರ್, ತಮ್ಮ ವಿವಾಹ ಸಮಾರಂಭಕ್ಕಾಗಿ ರೂ. 200 ಕೋಟಿ ವ್ಯಯಿಸಿದ್ದಾರೆ. ಈ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ತಮ್ಮ ಕುಟುಂಬದ ಸದಸ್ಯರಿಗೆ ನಾಗಪುರದಿಂದ ಯುಎಇಗೆ ಖಾಸಗಿ ಜೆಟ್ ವಿಮಾನಗಳನ್ನು ಬಾಡಿಗೆ ಪಡೆದಿದ್ದು, ಆ ಸಮಾರಂಭದಲ್ಲಿ ಪ್ರದರ್ಶನ ನೀಡಲು ತಾರಾ ನಟರಿಗೆ ದೊಡ್ಡ ಮೊತ್ತವನ್ನು ಪಾವತಿಸಲಾಗಿತ್ತು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಕಾರ್ಯಕ್ರಮ ಆಯೋಜನೆಯ ಕಂಪನಿಯಾದ ಮೆಷರ್ಸ್ ಆರ್-1 ಇವೆಂಟ್ಸ್ ಪ್ರೈ. ಲಿ.ಗೆ ಹವಾಲಾ ಜಾಲದ ಮೂಲಕ 112 ಕೋಟಿ ಮೊತ್ತವನ್ನು ಪಾವತಿಸಲಾಗಿದ್ದು, ಹೋಟೆಲ್ ಅನ್ನು ಮುಂಗಡ ಕಾದಿರಿಸಲು ರೂ. 42 ಕೋಟಿ ನಗದನ್ನು ಪಾವತಿಸಲಾಗಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶುಕ್ರವಾರ ಜಾರಿ ನಿರ್ದೇಶನಾಲಯದ ಕಚೇರಿಗೆ ರಣಬೀರ್ ಕಪೂರ್ ಅವರೇ ಖುದ್ದಾಗಿ ಹಾಜರಾಗುತ್ತಾರೊ ಅಥವಾ ತಮ್ಮ ಪ್ರತಿನಿಧಿಯನ್ನು ಕಳಿಸುತ್ತಾರೊ ಎಂಬುದು ಈವರೆಗೆ ದೃಢಪಟ್ಟಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News