ಸಾಮೂಹಿಕ ಅತ್ಯಾಚಾರ ಪ್ರಕರಣ: ಬಿಜೆಪಿ ನಾಯಕ ಸೇರಿ 6 ಮಂದಿಯ ವಿರುದ್ಧ ಪ್ರಕರಣ ದಾಖಲು

Update: 2023-08-28 14:15 GMT

ಜೈಪುರ: ಪಾಲಿಯಲ್ಲಿ 45 ವರ್ಷ ವಯಸ್ಸಿನ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಆಕೆಯ ಅಪ್ರಾಪ್ತ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಿಜೆಪಿ ನಾಯಕ ಹಾಗೂ ಐದು ಮಂದಿಯ ವಿರುದ್ಧ ರವಿವಾರ ರಾಜಸ್ಥಾನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪೊಲೀಸರ ಪ್ರಕಾರ, ಪಾಲಿ ಜಿಲ್ಲೆಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಮೋಹನ್ ಜಾಟ್, ಆಗಸ್ಟ್ 24ರಂದು ನಿವೇಶನವೊಂದನ್ನು ನೋಡುವಂತೆ ಸಂತ್ರಸ್ತ ಮಹಿಳೆಯನ್ನು ಕರೆಸಿಕೊಂಡ ನಂತರ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

“ತನ್ನನ್ನು ಸ್ಥಳಕ್ಕೆ ಕರೆಸಿಕೊಂಡ ನಂತರ ಮೋಹನ್ ಜಾಟ್ ಹಾಗೂ ಆತನ ಸಹಚರರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದರು ಎಂದು ದೂರುದಾರ ಮಹಿಳೆಯು ಆರೋಪಿಸಿದ್ದಾರೆ” ಎಂದು ದೂರು ದಾಖಲಾಗಿರುವ ಪಾಲಿ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಹೇಳಿದ್ದಾರೆ. “ಮೋಹನ್ ಜಾಟ್ ಅಲ್ಲದೆ, ಮೂವರು ಮಹಿಳೆಯರು, ಓರ್ವ ಪುರುಷ ಹಾಗೂ ಓರ್ವ ಅಪರಿಚಿತ ವ್ಯಕ್ತಿಯನ್ನೂ ಆರೋಪಿಗಳನ್ನಾಗಿ ಹೆಸರಿಸಲಾಗಿದೆ” ಎಂದೂ ಅವರು ತಿಳಿಸಿದ್ದಾರೆ.

ಮೋಹನ್ ಜಾಟ್ ತನ್ನ ಅಪ್ರಾಪ್ತ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಸಂತ್ರಸ್ತ ಮಹಿಳೆಯು ಆರೋಪಿಸಿದ್ದಾಳೆ ಎಂದು India Today ವರದಿ ಮಾಡಿದೆ.

ಸಂತ್ರಸ್ತ ಮಹಿಳೆಯ ದೂರನ್ನು ಆಧರಿಸಿ, ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳಾದ ಸಾಮೂಹಿಕ ಅತ್ಯಾಚಾರ, ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಹಾಗೂ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಕೆಲವು ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು Hindustan Times ವರದಿ ಮಾಡಿದೆ.

ಆದರೆ, ತನ್ನ ವಿರುದ್ಧದ ಆರೋಪಗಳು ಸುಳ್ಳಾಗಿದ್ದು, ನಾನು ಆ ಮಹಿಳೆಯನ್ನು ಎಂದೂ ಭೇಟಿಯಾಗಿಲ್ಲ ಎಂದು ಮೋಹನ್ ಜಾಟ್ The Indian Express ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

“ನಾನು ಕಾಲನಿಯೊಂದನ್ನು ನಿರ್ಮಿಸಿದ್ದು, ಅಲ್ಲಿರುವ ನಿವೇಶನಗಳನ್ನು ನಾನು ಮಾರಾಟ ಮಾಡುತ್ತೇನೆ. ಆ ನಿವೇಶನಗಳನ್ನು ಖರೀದಿಸುವ ಆಸಕ್ತಿ ತೋರಿ ಯಾರಾದರೂ ನನಗೆ ಕರೆ ಮಾಡಿದರೆ, ಅವರಿಗೆ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸುತ್ತೇನೆ. ನಂತರ ನನ್ನ ಉದ್ಯೋಗಿಗಳು ಅವರಿಗೆ ನಿವೇಶನಗಳನ್ನು ತೋರಿಸುತ್ತಾರೆ. ನಾನು ಅವರನ್ನು ಖುದ್ದಾಗಿ ಭೇಟಿ ಮಾಡುವುದಿಲ್ಲ. ನನ್ನ ವಿರುದ್ಧದ ಆರೋಪಗಳು ಆಧಾರ ರಹಿತವಾಗಿದ್ದು, ನನಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದೆ” ಎಂದು ಮೋಹನ್ ಜಾಟ್ ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News