ನಾಲ್ಕು ವರ್ಷಗಳಿಂದಲೂ ಔಷಧಿ ಜಾಹೀರಾತು ಕಾಯ್ದೆಯ ಕರಡು ತಿದ್ದುಪಡಿಯ ಮೇಲೆ ಕುಳಿತಿರುವ ಸರಕಾರ; ವರದಿ

Update: 2024-11-11 12:03 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಆಯುಷ್ ಔಷಧಿಗಳು ಸೇರಿದಂತೆ ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಗುರಿಯನ್ನು ಹೊಂದಿರುವ ಡ್ರಗ್ಸ್ ಆ್ಯಂಡ್ ಮ್ಯಾಜಿಕ್ ರೆಮೆಡೀಸ್(ಆಕ್ಷೇಪಾರ್ಹ ಜಾಹೀರಾತು) ಕಾಯ್ದೆ,1954ಕ್ಕೆ ತಿದ್ದುಪಡಿ ಕರಡು ಸಿದ್ಧಗೊಂಡಿದೆಯಾದರೂ ಕಳೆದ ನಾಲ್ಕು ವರ್ಷಗಳಿಂದಲೂ ಸರಕಾರವು ಅದರ ಮೇಲೆ ಪಟ್ಟಾಗಿ ಕುಳಿತುಕೊಂಡಿದೆ ಎಂದು newindianexpress.com ವರದಿ ಮಾಡಿದೆ.

ಕರಡು ಪ್ರಸ್ತಾವವನ್ನು ಮೂಲೆಗುಂಪು ಮಾಡಿರುವ ಕೇಂದ್ರ ಆರೋಗ್ಯ ಸಚಿವಾಲಯವು ಕಾಯ್ದೆಯ ಪರಿಣಾಮಕಾರಿತ್ವದ ಬಗ್ಗೆ ಕಳವಳಗಳು ವ್ಯಕ್ತಗೊಂಡ ನಂತರ ಕರಡು ತಿದ್ದುಪಡಿಯನ್ನು ಪ್ರಸ್ತಾವಿಸಿತ್ತು. ಕರಡು ತಿದ್ದುಪಡಿಯು 24 ರೋಗಗಳು ಮತ್ತು ಅಸ್ವಸ್ಥತೆಗಳನ್ನು ಸೇರಿಸುವ ಮೂಲಕ ಕಾಯ್ದೆಯ ವ್ಯಾಪ್ತಿಯನ್ನೂ ವಿಸ್ತರಿಸಿದೆ.

ಆರೋಗ್ಯ ಸಚಿವಾಲಯವು ನ.7ರಂದು ನೀಡಿರುವ ಆರ್‌ಟಿಐ ಉತ್ತರದಲ್ಲಿ, ಕರಡು ತಿದ್ದುಪಡಿಯು ಇನ್ನೂ ಬಾಕಿಯಿದೆ,ಹೆಚ್ಚಿನ ಟಿಪ್ಪಣಿ ಲಭ್ಯವಿಲ್ಲ ಎಂದು ತಿಳಿಸಿದೆ.

ಸರ್ವೋಚ್ಚ ನ್ಯಾಯಾಲಯವು ಕಣ್ಣಿನ ಹನಿ, ದೃಷ್ಟಿ ಕಣ್ಣಿನ ಹನಿ ಸೇರಿದಂತೆ ತನ್ನ ಉತ್ಪನ್ನಗಳ ದಾರಿ ತಪ್ಪಿಸುವ ಜಾಹೀರಾತುಗಳಿಗಾಗಿ ಯೋಗಗುರು ಬಾಬಾ ರಾಮದೇವ ಅವರನ್ನು ತೀವ್ರ ತರಾಟೆಗೆತ್ತಿಕೊಂಡ ಬಳಿಕ ಸಚಿವಾಲಯದ ಈ ಪ್ರತಿಕ್ರಿಯೆ ಹೊರಬಿದ್ದಿದೆ. ಇವು ಗ್ಲುಕೋಮಾ ಅಥವಾ ಕಣ್ಣಿನ ಪೊರೆ,ಡಬಲ್ ವಿಜನ್, ಇರುಳುಗುರುಡುತನದಂತಹ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತವೆ ಎಂದು ಈ ಜಾಹೀರಾತುಗಳಲ್ಲಿ ಹೇಳಲಾಗಿತ್ತು. ಡಿಎಂಆರ್ ಕಾಯ್ದೆ,1954ರಡಿ ಇಂತಹ ಹೇಳಿಕೆಗಳ ಜಾಹೀರಾತುಗಳನ್ನು ನಿಷೇಧಿಸಲಾಗಿದೆ.

ಪತಂಜಲಿ ಆಯುರ್ವೇದ ಆಯುಷ್ ಉತ್ಪನ್ನಗಳ ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ ಸಂಬಂಧಿಸಿದಂತೆ ತನ್ನ ಯಾವುದೇ ಆದೇಶಗಳನ್ನು ಉಲ್ಲಂಘಿಸಿದ್ದು ಕಂಡು ಬಂದರೆ ಅದರ ವಿರುದ್ಧ ತೀವ್ರ ಕ್ರಮ ಕೈಗೊಳ್ಳುವುದಾಗಿ ಸರ್ವೋಚ್ಚ ನ್ಯಾಯಾಲಯದ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ತಾನು ನ.4ರಂದು ಹೊಸದಾಗಿ ಆರ್‌ಟಿಐ ಅರ್ಜಿಯನ್ನು ಸಲ್ಲಿಸಿದ್ದೆ. ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ತಡೆಯಲು ಡಿಎಂಆರ್ ಕಾಯ್ದೆಗೆ ತನ್ನ ಪ್ರಸ್ತಾವಿತ ತಿದ್ದುಪಡಿಯನ್ನು ಸರಕಾರವು ಮೂಲೆಗುಂಪು ಮಾಡಿರುವುದು ಆಶ್ಚರ್ಯಕರವಾಗಿದೆ. ಕಳೆದ ಎರಡು ವರ್ಷಗಳಿಂದ ಕಡತಗಳು ಅಲುಗಾಡಿಯೇ ಇಲ್ಲ ಎಂದು ಹೇಳಿದ ಕೇರಳದ ಡಾ.ಕೆ.ವಿ.ಬಾಬು ಅವರು,ಪತಂಜಲಿ ಆಯುರ್ವೇದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಗಂಭೀರ ನಿಲುವು ತಳೆದಿದ್ದರೂ ಸರಕಾರಕ್ಕೆ ಸಾರ್ವಜನಿಕ ಆರೋಗ್ಯಕ್ಕಿಂತ ವ್ಯಾಪಾರ ಸುಗಮತೆಯೇ ಹೆಚ್ಚಾಗಿದೆಯೇ ಎಂದು ಪ್ರಶ್ನಿಸಿದರು. ಡಾ.ಬಾಬು ಕಳೆದ ಹಲವಾರು ವರ್ಷಗಳಿಂದಲೂ ರಾಮದೇವ ವಿರುದ್ಧ ಕ್ರಮಕ್ಕಾಗಿ ಪಟ್ಟು ಬಿಡದೆ ಹೋರಾಡುತ್ತಿದ್ದಾರೆ.

ಸಚಿವಾಲಯವು 2020,ಫೆ.3ರಂದು ಕರಡು ತಿದ್ದುಪಡಿ ಮಸೂದೆಯನ್ನು ಪ್ರಕಟಿಸಿತ್ತು ಮತ್ತು ಸಂಬಂಧಿಸಿದವರ ಪ್ರತಿಕ್ರಿಯೆಗಳನ್ನು ಆಹ್ವಾನಿಸಿತ್ತು. ಆದರೆ ನಂತರ ಅದನ್ನು ಅನುಷ್ಠಾನಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಕರಡು ತಿದ್ದುಪಡಿಯು ಕಾಯ್ದೆಯ ಉಲ್ಲಂಘನೆಗಾಗಿ ದಂಡಗಳನ್ನು ಹೆಚ್ಚಿಸಲೂ ಪ್ರಸ್ತಾವಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News