ಹೆಚ್ಚು ಮಕ್ಕಳನ್ನು ಪಡೆಯಿರಿ, ಪ್ರಧಾನಿ ಮನೆ ಕಟ್ಟಿಸಿ ಕೊಡುತ್ತಾರೆ: ರಾಜಸ್ಥಾನ ಸಚಿವ
ಜೈಪುರ : ನೀವು ಹೆಚ್ಚು ಹೆಚ್ಚು ಮಕ್ಕಳನ್ನು ಪಡೆಯಿರಿ. ಯಾವುದೇ ಸಮಸ್ಯೆ ಇಲ್ಲ. ಯಾಕೆಂದರೆ, ಪ್ರಧಾನಿ ನರೇಂದ್ರ ಮೋದಿ ಉಚಿತ ಮನೆಗಳನ್ನು ಕಟ್ಟಿಸಿಕೊಡುತ್ತಾರೆ ಎಂದು ರಾಜಸ್ಥಾನದ ಬುಡಕಟ್ಟು ಪ್ರದೇಶ ಅಭಿವೃದ್ಧಿ ಸಚಿವ ಬಾಬುಲಾಲ್ ಖರಾಡಿ ಸಲಹೆ ನೀಡಿದ್ದಾರೆ.
ಉದಯಪುರದ ನೈ ಗ್ರಾಮದಲ್ಲಿ ಮಂಗಳವಾರ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಯಾರೊಬ್ಬರೂ ಹಸಿವೆಯಿಂದ ಬಳಲಬಾರದು ಹಾಗೂ ತಮ್ಮ ತಲೆ ಮೇಲೆ ಸೂರು ಇಲ್ಲದೇ ಇರಬಾರದು ಎಂಬುದು ಪ್ರಧಾನಿ ಅವರ ಕನಸು ಎಂದರು.
ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಹಲವು ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಆದುದರಿಂದ 2024ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರಿಗೆ ಮತ ನೀಡಿ ಎಂದು ಅವರು ಜನರಲ್ಲಿ ವಿನಂತಿಸಿದರು.
ಸಭೆಯಲ್ಲಿ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ಕೂಡ ಉಪಸ್ಥಿತರಿದ್ದರು. ಖರಾಡಿ ಅವರು ನಾಲ್ಕು ಬಾರಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಇಬ್ಬರು ಪತ್ನಿಯರಿದ್ದು, 8 ಜನ ಮಕ್ಕಳಿದ್ದಾರೆ.