ನಿಮ್ಮ ರಾಜಕೀಯ ಲಾಭಕ್ಕಾಗಿ ಎಷ್ಟು ಬಾರಿ ರಾಮನ ಹೆಸರನ್ನು ಬಳಸಿಕೊಳ್ಳುತ್ತೀರಿ?: ಬಿಜೆಪಿಗೆ ಕಪಿಲ್ ಸಿಬಲ್ ಪ್ರಶ್ನೆ
ಹೊಸದಿಲ್ಲಿ: ಬಿಜೆಪಿಯು ಶ್ರೀರಾಮನ ಹೆಸರನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದು, ಅದರ ಆಡಳಿತವು ರಾಮನ ಯಾವುದೇ ತತ್ವಾದರ್ಶಗಳನ್ನು ಹೊಂದಿಲ್ಲ ಎಂದು ಬುಧವಾರ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಹೇಳಿದ್ದಾರೆ.
ಶ್ರೀರಾಮನಿಗೆ ಮೀಸಲಿರಿಸಿರುವ ಭವ್ಯ ದೇವಾಲಯವನ್ನು ಅಯೋಧ್ಯೆಯಲ್ಲಿ ನಿರ್ಮಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಿದ ಮರುದಿನ ಕಪಿಲ್ ಸಿಬಲ್ ಅವರ ಈ ಪ್ರತಿಕ್ರಿಯೆ ಹೊರ ಬಿದ್ದಿದೆ.
ಇದಕ್ಕೂ ಮುನ್ನ, ಪ್ರಧಾನಿ ನರೇಂದ್ರ ಮೋದಿ, “ಶ್ರೀರಾಮನು ಇನ್ನೇನು ಬರಲಿದ್ದಾನೆ. ಆತನಿಗಾಗಿ ನಿರ್ಮಿಸಿರುವ ದೇವಾಲಯವು ವಿಶ್ವದಾದ್ಯಂತ ಸಂತೋಷವನ್ನು ಪಸರಿಸಲಿದೆ” ಎಂದು ಹೇಳಿದ್ದರು.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಪಿಲ್ ಸಿಬಲ್, “ಬಿಜೆಪಿಯ ರಾಜಕೀಯ ಲಾಭಕ್ಕಾಗಿ ಶ್ರೀರಾಮನನ್ನು ಎಷ್ಟು ಬಾರಿ ಬಳಸಿಕೊಳ್ಳುತ್ತೀರಿ? ನೀವೇಕೆ ಆತನ ಶೌರ್ಯ, ಅಶ‍್ವಾದಳ, ನಿಷ್ಠೆ, ಸಹಾನುಭೂತಿ, ಪ್ರೀತಿ, ವಿಧೇಯತೆ, ಧೈರ್ಯ ಹಾಗೂ ಸಮಚಿತ್ತತೆಯಂಥ ತತ್ವಾದರ್ಶಗಳನ್ನು ಅಳವಡಿಸಿಕೊಂಡಿಲ್ಲ?” ಎಂದು ಪ್ರಶ್ನಿಸಿದ್ದಾರೆ.
“ನಿಮ್ಮ ಆಡಳಿತವು ಈ ಯಾವುದೇ ತತ್ವಾದರ್ಶಗಳನ್ನು ಪ್ರದರ್ಶಿಸುತ್ತಿಲ್ಲ” ಎಂದೂ ಅವರು ಟೀಕಿಸಿದ್ದಾರೆ.