ಸೇನೆಯು ಈ ರೀತಿ ಮಾಡುತ್ತದೆ ಎಂದು ನನಗೆ ನಂಬಲಾಗುತ್ತಿಲ್ಲ: ಸೇನೆಯ ವಶದಲ್ಲಿ ಮೃತಪಟ್ಟ ಜಮ್ಮು ಮತ್ತು ಕಾಶ್ಮೀರ ನಾಗರಿಕನ ಸಹೋದರನ ಹೇಳಿಕೆ
ಶ್ರೀನಗರ: ಸೇನಾ ವಾಹನದ ಮೇಲೆ ನಡೆದಿದ್ದ ಹೊಂಚು ದಾಳಿಯಲ್ಲಿ ನಾಲ್ವರು ಯೋಧರು ಹತರಾದ ನಂತರ, ಸೇನೆಯ ಕಾರ್ಯಾಚರಣೆಯ ಸಂದರ್ಭದಲ್ಲಿ ಸೇನೆಯು ವಶಕ್ಕೆ ಪಡೆದಿದ್ದ ಜಮ್ಮು ಮತ್ತು ಕಾಶ್ಮೀರದ ನಾಗರಿಕ ಸಫೀರ್ ಅಹ್ಮದ್ ಎಂಬಾತ ಗಡಿ ಭದ್ರತಾ ಪಡೆಯ ಕಾನ್ಸ್‌ಟೇಬಲ್ ನೂರ್ ಅಹ್ಮದ್ ಎಂಬುವವರ ಸಹೋದರನಾಗಿರುವುದು ಸೇನೆಯ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಜಮ್ಮು ಮತ್ತು ಕಾಶ‍್ಮೀರದಲ್ಲಿ ಸೇನೆಯು ನಡೆಸುತ್ತಿರುವ ಅಮಾನುಷ ಪ್ರತಿ ಭಯೋತ್ಪಾದನೆಗೆ ಇದು ಸಾಕ್ಷಿಯಾಗಿದೆ ಎಂಬ ಮಾತುಗಳು ಕಣಿವೆ ರಾಜ್ಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿವೆ. ಪೂಂಚ್ ನಲ್ಲಿ ಯೋಧರ ಮೇಲೆ ನಡೆದ ದಾಳಿಯ ಹೊಣೆಯನ್ನು ಪೀಪಲ್ಸ್ ಆ್ಯಂಟಿ-ಫ್ಯಾಸಿಸ್ಟ್ ಫ್ರಂಟ್ ಹೊತ್ತುಕೊಂಡಿದೆ.
ಸೇನೆಯ ವಶದಲ್ಲಿ ಮೃತಪಟ್ಟಿರುವ ಸಫೀರ್ ಅಹ್ಮದ್ ತಮ್ಮ ಪತ್ನಿ ಹಾಗೂ ನಾಲ್ಕು ಮಕ್ಕಳನ್ನು ಅಗಲಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರ ಸಹೋದರ ಹಾಗೂ ಗಡಿ ಭದ್ರತಾ ಪಡೆಯ ಕಾನ್ಸ್‌ಟೇಬಲ್ ನೂರ್ ಅಹ್ಮದ್, ನಾನು ತೀವ್ರ ಕಿರುಕುಳಕ್ಕೊಳಗಾಗಿರುವ ನನ್ನ ಸಹೋದರನ ಮೃತದೇಹವನ್ನು ನೋಡುವವರೆಗೂ ಆ ವಿಷಯವನ್ನು ನಂಬಿರಲಿಲ್ಲ. ಸೇನೆಯು ಈ ರೀತಿ ಮಾಡುತ್ತದೆ ಎಂದು ನಾನು ನಂಬಲಾಗುತ್ತಿಲ್ಲ” ಎಂದು ಹೇಳಿದ್ದಾರೆ.
“ಸೇನೆಯು ವಶಕ್ಕೆ ಪಡೆದು, ಕಿರುಕುಳ ನೀಡಿದ್ದ ವ್ಯಕ್ತಿಗಳು ಮುಗ್ಧರು ಎಂದು ರಕ್ಷಣಾ ಸಚಿವರು ನಮಗೆ ತಿಳಿಸಿದ್ದಾರೆ. ಜೀವಕ್ಕೆ ಬದಲಿ ಏನೂ ನೀಡಲು ಸಾಧ್ಯವಿಲ್ಲ. ಆದರೆ, ಈ ಕೃತ್ಯಕ್ಕೆ ಹೊಣೆಗಾರರಾಗಿರುವ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ” ಎಂದು ನೂರ್ ಅಹ್ಮದ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಸೇನೆಯ ವಶದಲ್ಲಿ ಮೃತಪಟ್ಟಿದ್ದ ಸಫೀರ್ ಹಾಗೂ ಇನ್ನಿತರ ಇಬ್ಬರು ಕುಟುಂಬದ ಸದಸ್ಯರು ನೂರ್ ಅಹ್ಮದ್ ನೇತೃತ್ವದಲ್ಲಿ ಬುಧವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ, ತಪ್ಪಿತಸ್ಥ ಯೋಧರಿಗೆ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದ್ದರು.