ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ಭಾರತವನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೆ ಮರಳಿದ ಆಸ್ಟ್ರೇಲಿಯ
ಹೊಸದಿಲ್ಲಿ: ಈಗ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆಯೊಂದಿಗೆ ಸರಣಿ ವಶಪಡಿಸಿಕೊಂಡಿರುವ ಆಸ್ಟ್ರೇಲಿಯ ಕ್ರಿಕೆಟ್ ತಂಡ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಭಾರತವನ್ನು ಹಿಂದಿಕ್ಕಿ ನಂ.1 ಸ್ಥಾನವನ್ನು ಮರಳಿ ಪಡೆದಿದೆ.
ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ಟೌನ್ ಟೆಸ್ಟ್ ಪಂದ್ಯವನ್ನು 7 ವಿಕೆಟ್ನಿಂದ ಜಯಿಸಿ ಎರಡು ಪಂದ್ಯಗಳ ಸರಣಿಯನ್ನು ಸಮಬಲಗೊಳಿಸಿದ ಹೊರತಾಗಿಯೂ ಆಸ್ಟ್ರೇಲಿಯವು ಅಮೋಘ ಪ್ರದರ್ಶನ ನೀಡಿ ನಂ.1 ಸ್ಥಾನವನ್ನು ಮತ್ತೆ ಪಡೆದುಕೊಂಡಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಜಯಶಾಲಿಯಾಗಿರುವ ಆಸ್ಟ್ರೇಲಿಯ ಸದ್ಯ ಸ್ವದೇಶದಲ್ಲಿ ನಡೆಯುತ್ತಿರುವ ಪಾಕಿಸ್ತಾನದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗೆಲುವಿನ ಓಟವನ್ನು ಐಸಿಸಿ ಗಮನಿಸಿದೆ. ಇದು ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಆಸ್ಟ್ರೇಲಿಯದ ಪುನಶ್ಚೇತನಕ್ಕೆ ಕೊಡುಗೆ ನೀಡಿದೆ.
ತಂಡದ ನಾಯಕತ್ವ ವಹಿಸಿರುವ ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯದ ಇತ್ತೀಚೆಗಿನ ಸಾಧನೆಗಳಿಗೆ ಪ್ರಮುಖ ಪಾತ್ರವಹಿಸಿದ್ದಾರೆ.
ತಲಾ 118 ರೇಟಿಂಗ್ ಪಾಯಿಂಟ್ಸ್ ನೊಂದಿಗೆ ಭಾರತ ಹಾಗೂ ಆಸ್ಟ್ರೇಲಿಯ ಟೈ ಸಾಧಿಸಿದ್ದರೂ ಈ ಹಿಂದಿನ ರ‍್ಯಾಂಕಿಂಗ್ ನಲ್ಲಿ ಭಾರತವು ಹೆಚ್ಚು ಅಂಕ ಹೊಂದಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಭಾರತವು ಡ್ರಾ ಸಾಧಿಸಿದ ನಂತರ ಆಸ್ಟ್ರೇಲಿಯವು ನಂ.1 ಸ್ಥಾನಕ್ಕೆ ಮರಳಿದೆ ಎಂದು ಐಸಿಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಭಾರತವು ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡಿದ್ದರೂ ನಾಲ್ಕು ಪಂದ್ಯಗಳಲ್ಲಿ 2ರಲ್ಲಿ ಜಯ, ಒಂದರಲ್ಲಿ ಸೋಲು ಹಾಗೂ ಒಂದರಲ್ಲಿ ಡ್ರಾ ಸಾಧಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ 54.16 ಶೇಕಡಾವಾರು ಪಾಯಿಂಟ್ಸ್ನೊಂದಿಗೆ ಸದ್ಯ ಅಗ್ರ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. ನ್ಯೂಝಿಲ್ಯಾಂಡ್ ಮೂರನೇ ಹಾಗೂ ಆಸ್ಟ್ರೇಲಿಯ ನಾಲ್ಕನೇ ಸ್ಥಾನದಲ್ಲಿವೆ. ಈ ಎಲ್ಲ ತಂಡವು ಡಬ್ಲ್ಯುಟಿಸಿ ಪಟ್ಟಿಯಲ್ಲಿ 50 ಶೇಕಡವಾರು ಅಂಕವನ್ನು ಗಳಿಸಿದೆ.
ಈಗ ನಡೆಯುತ್ತಿರುವ ಆಸ್ಟ್ರೇಲಿಯ ಹಾಗೂ ಪಾಕಿಸ್ತಾನ ನಡುವಿನ ಮೂರನೇ ಟೆಸ್ಟ್, ಜೊತೆಗೆ ಮುಂಬರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯು ಟೆಸ್ಟ್ ಟೀಮ್ ರ‍್ಯಾಂಕಿಂಗ್ ನಲ್ಲಿ ಇನ್ನಷ್ಟು ಬದಲಾವಣೆ ಮೇಲೆ ಪ್ರಭಾವಬೀರುವ ನಿರೀಕ್ಷೆ ಇದೆ. ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ಸ್ ರೇಸ್ ನ ಮೊದಲ ಸ್ಥಾನಿಯನ್ನು ನಿರ್ಧರಿಸಲಿದೆ.
ಆಸ್ಟ್ರೇಲಿಯವು ಟೆಸ್ಟ್ ಕ್ರಿಕೆಟ್ ನಲ್ಲಿ ನಂ.1 ಸ್ಥಾನಕ್ಕೇರುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ತನ್ನ ಸ್ಮರಣೀಯ ವರ್ಷದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ.