‘2024ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಿದರೆ..’: ಮಮತಾ ಬ್ಯಾನರ್ಜಿ ನೀಡಿದ ಎಚ್ಚರಿಕೆಯೇನು?

Update: 2023-08-28 14:15 GMT

ಮಮತಾ ಬ್ಯಾನರ್ಜಿ | Photo: PTI 

ಕೋಲ್ಕತ್ತಾ: ಒಂದು ವೇಳೆ ಸತತ ಮೂರನೆಯ ಬಾರಿ ಬಿಜೆಪಿ ಅಧಿಕಾರಕ್ಕೆ ಮರಳಿದರೆ ದೇಶವು ನಿರಂಕುಶಾಧಿಕಾರವನ್ನು ಎದುರಿಸಬೇಕಾಗುತ್ತದೆ. ಬಿಜೆಪಿ ಸರ್ಕಾರವು ಡಿಸೆಂಬರ್ ತಿಂಗಳಲ್ಲೇ ಅಥವಾ ಮುಂದಿನ ವರ್ಷ ಜನವರಿಯಲ್ಲಿ ಚುನಾವಣೆ ನಡೆಸುವ ಸಾಧ್ಯತೆ ಇದೆ ಎಂಬ ಅಂದಾಜಿದೆ ಎಂದು ಸೋಮವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.

ತೃಣಮೂಲ ಕಾಂಗ್ರೆಸ್ ಪಕ್ಷದ ಯುವ ಘಟಕದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಬಿಜೆಪಿ ಮೂರನೆಯ ಬಾರಿ ಅಧಿಕಾರಕ್ಕೆ ಮರಳಿದರೆ ದೇಶವು ನಿರಂಕುಶಾಧಿಕಾರವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಬಿಜೆಪಿ ಸರ್ಕಾರವು ಡಿಸೆಂಬರ್ ತಿಂಗಳಲ್ಲಿ ಚುನಾವಣೆ ನಡೆಸುವ ಸಾಧ್ಯತೆ ಇದ್ದು, ಚುನಾವಣಾ ಪ್ರಚಾರಕ್ಕಾಗಿ ಎಲ್ಲ ಹೆಲಿಕಾಪ್ಟರ್ ಗಳನ್ನು ಕೇಸರಿ ಪಕ್ಷ ಕಾಯ್ದಿರಿಸಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

“ಕೇಸರಿ ಪಕ್ಷವು ನಮ್ಮ ದೇಶವನ್ನು ಸಮುದಾಯಗಳ ನಡುವೆ ಹಗೆತನದ ಬೇಗೆ ಇರುವ ದೇಶವನ್ನಾಗಿ ಮಾರ್ಪಡಿಸಿದೆ. ಒಂದು ವೇಳೆ ಅವರು ಅಧಿಕಾರಕ್ಕೆ ಮರಳಿದರೆ, ನಮ್ಮ ದೇಶವನ್ನು ಹಗೆತನದ ದೇಶವನ್ನಾಗಿಸುತ್ತಾರೆ” ಎಂದು ಅವರು ಎಚ್ಚರಿಸಿದ್ದಾರೆ.

ಬಿಜೆಪಿ ಪಕ್ಷವು ಅದಾಗಲೇ ಲೋಕಸಭಾ ಪ್ರಚಾರ ಕಾರ್ಯಕ್ಕೆ ಹೆಲಿಕಾಪ್ಟರ್ ಗಳನ್ನು ಕಾಯ್ದಿ ರಿಸಿದ್ದು, ಇನ್ನಾವುದೇ ರಾಜಕೀಯ ಪಕ್ಷವೂ ಚುನಾವಣಾ ಪ್ರಚಾರಕ್ಕೆ ಅವುಗಳನ್ನು ಬಳಸಲು ಸಾಧ್ಯವಾಗಬಾರದು ಎಂಬ ಉದ್ದೇಶ ಹೊಂದಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

2024ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಬೇಕಿದ್ದು, ಸದ್ಯ ಮಮತಾ ಬ್ಯಾನರ್ಜಿ ನೀಡಿರುವ ಈ ಹೇಳಿಕೆಯು ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News