ಮಧ್ಯಪ್ರದೇಶ: ಆರೆಸ್ಸೆಸ್ ಕಚೇರಿಯ ಹಿಂದಿನ ಜಾಗದಲ್ಲಿ ನಿಷ್ಕ್ರಿಯ ಕೈಬಾಂಬ್ ಪತ್ತೆ
Update: 2024-02-25 16:48 GMT
ಭಿಂಡ್: ಭಿಂಡ್ ನಗರದಲ್ಲಿ ಆರೆಸ್ಸೆಸ್ ಕಚೇರಿಯ ಹಿಂಭಾಗದ ಖಾಲಿ ಜಾಗದಲ್ಲಿ 30-35 ವರ್ಷಗಳಷ್ಟು ಹಳೆಯದಾದ ನಿಷ್ಕ್ರಿಯ ಕೈಬಾಂಬ್ ಪತ್ತೆಯಾಗಿದೆ ಎಂದು ಪೋಲಿಸರು ರವಿವಾರ ತಿಳಿಸಿದರು.’
ಈ ಗ್ರೆನೇಡ್ ಸಮೀಪದ ಪ್ರದೇಶದಿಂದ ಆರೆಸ್ಸೆಸ್ ಕಚೇರಿಯ ಆವರಣವನ್ನು ತಲುಪಿರುವ ಸಾಧ್ಯತೆಯಿದೆ, ಆ ಪ್ರದೇಶದಲ್ಲಿಯ ದೀದಿ ಗ್ರಾಮದಲ್ಲಿ ಈ ಹಿಂದೆ ಪೋಲಿಸ್ ಫೈರಿಂಗ್ ರೇಂಜ್ ಇತ್ತು ಎಂದು ಎಸ್‌ಪಿ ಅಸಿತ್ ಯಾದವ್ ತಿಳಿಸಿದರು.
‘ಶನಿವಾರ ರಾತ್ರಿ 10:30ರ ಸುಮಾರಿಗೆ ನಮಗೆ ಮಾಹಿತಿ ಸಿಕ್ಕ ಬಳಿಕ ಸ್ಥಳಕ್ಕೆ ಸ್ನಿಫರ್ ಶ್ವಾನಗಳು ಮತ್ತು ಬಾಂಬ್ ನಿಷ್ಕ್ರಿಯ ದಳವನ್ನು ರವಾನಿಸಲಾಗಿದ್ದು, ಕೈಬಾಂಬ್ ನಿಷ್ಕ್ರಿಯಗೊಂಡಿರುವುದು ತಿಳಿದು ಬಂದಿದೆ. ಕೈಬಾಂಬ್ ಪತ್ತೆಯಾದ ಸಂದರ್ಭ ಆರೆಸ್ಸೆಸ್ ಪದಾಧಿಕಾರಿಗಳು ಸಭೆಗಾಗಿ ಇನ್ನೊಂದು ನಗರದಲ್ಲಿದ್ದು, ಕಚೇರಿಯು ಖಾಲಿಯಿತ್ತು’ ಎಂದ ಯಾದವ್, ಕಚೇರಿ ಸಂಕೀರ್ಣದ ನೆಲಕ್ಕೆ ಹಿಂದೆ ಮಣ್ಣು ತುಂಬಿದ್ದಿರಬಹುದು ಮತ್ತು ಅದರೊಂದಿಗೆ ಕೈಬಾಂಬ್ ಅಲ್ಲಿಗೆ ತಲುಪಿರಬಹುದು ಎಂದರು.