ಇಂದಿರಾ ಗಾಂಧಿ ಜನ್ಮದಿನದಂದು ಪಂದ್ಯ ನಡೆದ ಕಾರಣ ಭಾರತ ವಿಶ್ವಕಪ್ ಸೋತಿತು: ಅಸ್ಸಾಂ ಸಿಎಂ ಹಿಮಂತ ಶರ್ಮಾ
ಇಂದಿರಾ ಗಾಂಧಿಯವರ ಜನ್ಮದಿನದಂದು ಪಂದ್ಯದ ದಿನಾಂಕದ ಕಾರಣ ಭಾರತ ಕ್ರಿಕೆಟ್ ವಿಶ್ವಕಪ್ ಫೈನಲ್ನಲ್ಲಿ ಸೋತಿದೆ ಎಂದು ಹೇಳಿರುವ ಹಿಮಂತ ಶರ್ಮಾ, ಗಾಂಧಿ ಕುಟುಂಬದ ಸದಸ್ಯರ ಜನ್ಮದಿನದಂದು ಭವಿಷ್ಯದ ಯಾವುದೇ ಪಂದ್ಯಗಳನ್ನು ನಿಗದಿಪಡಿಸದಂತೆ ಬಿಸಿಸಿಐಗೆ ವಿನಂತಿಸಿದ್ದೇನೆ ಎಂದು ಹೇಳಿದರು.
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮದಿನದಂದು ಆಸ್ಟ್ರೇಲಿಯ ವಿರುದ್ಧ ವಿಶ್ವಕಪ್ ಕ್ರಿಕೆಟ್ ಫೈನಲ್ನಲ್ಲಿ ಭಾರತ ಸೋತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬುಧವಾರ ಹೇಳಿದ್ದಾರೆ.
"ನಾವು ಎಲ್ಲಾ ಪಂದ್ಯಗಳಲ್ಲಿ ಗೆದ್ದಿದ್ದೇವೆ ಮತ್ತು ಫೈನಲ್ನಲ್ಲಿ ಸೋತಿದ್ದೇವೆ, ನಾವು ಪಂದ್ಯವನ್ನು ಏಕೆ ಸೋತಿದ್ದೇವೆ ಎಂದು ನಾನು ವಿಚಾರಿಸಿದೆ, ಮತ್ತು ಇಂದಿರಾ ಗಾಂಧಿಯವರ ಜನ್ಮದಿನದಂದು ವಿಶ್ವಕಪ್ ಫೈನಲ್ ಆಡಿರುವುದು ತಿಳಿಯಿತು. ಆ ಕಾರಣಕ್ಕಾಗಿ ಭಾರತ ವಿಶ್ವಕಪ್ ನಲ್ಲಿ ಸೋತಿತು" ಎಂದು ಅವರು ಹೇಳಿದ್ದಾರೆ.
ಗಾಂಧಿ ಕುಟುಂಬವನ್ನು ತರಾಟೆಗೆ ತೆಗೆದುಕೊಂಡ ಅಸ್ಸಾಂ ಮುಖ್ಯಮಂತ್ರಿ, " ನಾನು ವಿಶ್ವಕಪ್ ಸೋಲಿನಿಂದ ಒಂದು ಪಾಠ ಕಲಿತಿದ್ದೇನೆ. ಗಾಂಧಿ ಕುಟುಂಬದ ಸದಸ್ಯರ ಹುಟ್ಟುಹಬ್ಬದ ದಿನದಂದು ಭಾರತ ಕ್ರಿಕೆಟ್ ಪಂದ್ಯ ಆಡಬಾರದು ಎಂದು ಬಿಸಿಸಿಐಗೆ ಮನವಿ ಮಾಡುತ್ತೇನೆ" ಎಂದು ಹೇಳಿದ್ದಾರೆ.
ಮೋದಿ ಅವರ ಸ್ಟೇಡಿಯಂನಲ್ಲಿ ಕುಳಿತು ಫೈನಲ್ ಪಂದ್ಯ ವೀಕ್ಷಿಸಿದ್ದರಿಂದ ಭಾರತ ತಂಡ ಸೋಲಲು ಕಾರಣವಾಯಿತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜಸ್ತಾನದ ಚುನಾವಣಾ ಸಮಾವೇಶದಲ್ಲಿ ಹೇಳಿದ್ದರು. ಪ್ರಧಾನಿ ಮೋದಿಯನ್ನು ʼಕೆಟ್ಟ ಶಕುನʼ ಎಂದಿದ್ದರು. ಆ ಬಳಿಕ ನ.19 ರಂದು ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತದ ಸೋಲು ರಾಜಕೀಯ ತಿರುವು ಪಡೆದುಕೊಂಡಿತ್ತು.
ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರರೊಂದಿಗೆ ಅಹಮದಾಬಾದ್ ಸ್ಟೇಡಿಯಂನಲ್ಲಿ ನಡೆದ ಫೈನಲ್ನಲ್ಲಿ ಭಾಗವಹಿಸಿದ್ದರು. ಭಾರತದ ಸೋಲಿನ ನಂತರ 'ಪನೌಟಿ' ಎಂಬ ಪದವು ಅಂತರ್ಜಾಲದಲ್ಲಿ ಟ್ರೆಂಡಿಂಗ್ ಆಗಿದೆ.
ಬುಧವಾರ, ರಾಜಸ್ಥಾನದಲ್ಲಿ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಮಾಡಿದ ಹೇಳಿಕೆಗಳ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.