ಜೂನ್ 16 ರಿಂದ ಭಾರತ – ದಕ್ಷಿಣ ಆಫ್ರಿಕ ಮಹಿಳಾ ಕ್ರಿಕೆಟ್ ಸರಣಿ

Update: 2024-05-14 17:15 GMT

PC : PTI

ಮುಂಬೈ : ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಜೂನ್ ಮತ್ತು ಜುಲೈ ತಿಂಗಳಲ್ಲಿ ಸ್ವದೇಶದಲ್ಲಿ ದಕ್ಷಿಣ ಆಫ್ರಿಕ ಮಹಿಳಾ ತಂಡದ ವಿರುದ್ಧ ಬಹು ಮಾದರಿಯ ಕ್ರಿಕೆಟ್ ಸರಣಿಯೊಂದನ್ನು ಆಡಲಿದೆ. ಈ ಮೂಲಕ ಉಭಯ ತಂಡಗಳು ಒಂದು ದಶಕದ ಬಳಿಕ ಟೆಸ್ಟ್ ಕ್ರಿಕೆಟ್ ಆಡಲು ಸಜ್ಜಾಗಿವೆ.

ಭಾರತ ಮತ್ತು ದಕ್ಷಿಣ ಆಫ್ರಿಕ ಮಹಿಳಾ ಕ್ರಿಕೆಟ್ ತಂಡಗಳು ಜೂನ್ 16ರಿಂದ ಜುಲೈ 9ರವರೆಗೆ ಒಂದು ಟೆಸ್ಟ್ ಪಂದ್ಯ, ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲಿವೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ.

ಏಕದಿನ ಪಂದ್ಯಗಳು ಬೆಂಗಳೂರಿನಲ್ಲಿ ನಡೆದರೆ, ಟೆಸ್ಟ್ ಮತ್ತು ಟಿ20 ಪಂದ್ಯಗಳು ಚೆನ್ನೈನಲ್ಲಿ ನಡೆಯಲಿವೆ. ಈ ಎರಡು ತಂಡಗಳು ಕೊನೆಯದಾಗಿ ಪರಸ್ಪರ ಟೆಸ್ಟ್ ಪಂದ್ಯವೊಂದನ್ನು ಆಡಿದ್ದು 2014ರ ನವೆಂಬರ್ ನಲ್ಲಿ.

ಜೂನ್ 13ರಂದು, ಬೆಂಗಳೂರಿನ ಎಮ್. ಚಿನ್ನಾಸ್ವಾಮಿ ಸ್ಟೇಡಿಯಮ್ನಲ್ಲಿ ಏಕದಿನ ಅಭ್ಯಾಸ ಪಂದ್ಯವನ್ನು ಆಡುವುದರೊಂದಿಗೆ ಸರಣಿಯು ಆರಂಭಗೊಳ್ಳುತ್ತದೆ. ಈ ಪಂದ್ಯದಲ್ಲಿ ಪ್ರವಾಸಿ ಆಟಗಾರ್ತಿಯರು ಬಿಸಿಸಿಐ ಅಧ್ಯಕ್ಷರ ಇಲೆವೆನ್ ತಂಡದ ವಿರುದ್ಧ ಆಡಲಿದ್ದಾರೆ.

ಐಸಿಸಿ ಮಹಿಳಾ ಚಾಂಪಿಯನ್ಶಿಪ್ 2022-2025ರ ಹಿನ್ನೆಲೆಯಲ್ಲಿ, ಏಕದಿನ ಪಂದ್ಯಗಳು ಮಹತ್ವ ಪಡೆದುಕೊಂಡಿವೆ.

ಏಕದಿನ ಪಂದ್ಯಗಳು ಮಧ್ಯಾಹ್ನ 1:30ಕ್ಕೆ ಆರಂಭಗೊಂಡರೆ, ಟಿ20 ಪಂದ್ಯಗಳು ಸಂಜೆ 7 ಗಂಟೆಗೆ ಆರಂಭಗೊಳ್ಳುತ್ತವೆ.

ಐಸಿಸಿ ಭವಿಷ್ಯದ ಪ್ರವಾಸ ಕಾರ್ಯಕ್ರಮ (ಎಫ್ಟಿಪಿ)ದನ್ವಯ ನಿಗದಿತ ಓವರ್ಗಳ ಸರಣಿಯು 2023ರ ಕೊನೆಯಲ್ಲಿ ನಡೆಯಬೇಕಾಗಿತ್ತು. ಆದರೆ, ಕಳೆದ ವರ್ಷ ಭಾರತದಲ್ಲಿ ನಡೆದ ಪುರುಷರ ವಿಶ್ವಕಪ್ನ ಹಿನ್ನೆಲೆಯಲ್ಲಿ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ.

ಆದರೆ, ಈ ಬಾರಿ ಸರಣಿಯಲ್ಲಿ ಟೆಸ್ಟ್ ಪಂದ್ಯವೊಂದನ್ನು ಸೇರಿಸುವ ಮೂಲಕ ಮಹಿಳಾ ಕ್ರಿಕೆಟ್ ನ ಮಟ್ಟವನ್ನು ಮೇಲೇರಿಸಲು ಬಿಸಿಸಿಐ ಮತ್ತು ಕ್ರಿಕೆಟ್ ಸೌತ್ ಆಪ್ರಿಕ (ಸಿಎಸ್ಎ) ಜಂಟಿ ಪ್ರಯತ್ನ ನಡೆಸಿವೆ.

ವೇಳಾಪಟ್ಟಿ

ಜೂನ್ 13: ದಕ್ಷಿಣ ಆಫ್ರಿಕ-ಮಂಡಳಿ ಅಧ್ಯಕ್ಷರ ಇಲೆವೆನ್ (ಅಭ್ಯಾಸ ಪಂದ್ಯ)- ಬೆಂಗಳೂರು

ಜೂನ್ 16: ಮೊದಲ ಏಕದಿನ- ಬೆಂಗಳೂರು

ಜೂನ್ 19: ಎರಡನೇ ಏಕದಿನ- ಬೆಂಗಳೂರು

ಜೂನ್ 23: ಮೂರನೇ ಏಕದಿನ- ಬೆಂಗಳೂರು

ಜೂನ್ 28-ಜುಲೈ 1: ಏಕೈಕ ಟೆಸ್ಟ್- ಚೆನ್ನೈ

ಜುಲೈ 5: ಮೊದಲ ಟಿ20-ಚೆನ್ನೈ

ಜುಲೈ 7: ಎರಡನೇ ಟಿ20- ಚೆನ್ನೈ

ಜುಲೈ 9: ಮೂರನೇ ಟಿ20- ಚೆನ್ನೈ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News