ಭಾರತವು 2050ರ ವೇಳೆಗೆ ಇಡೀ ಆಫ್ರಿಕಾಕ್ಕಿಂತ ಹೆಚ್ಚಿನ ವಿದ್ಯುತ್ ಅನ್ನು AC ಗಳಿಗಾಗಿಯೇ ಬಳಸಲಿದೆ: ವರದಿ

Update: 2023-10-25 10:14 GMT

ಹೊಸದಿಲ್ಲಿ,ಅ.25: ಗೃಹಬಳಕೆ ಹವಾ ನಿಯಂತ್ರಣ ಯಂತ್ರ (AC)ಗಳಿಗಾಗಿ ಭಾರತದ ಒಟ್ಟು ವಿದ್ಯುತ್ ಬೇಡಿಕೆಯು 2050ರ ವೇಳೆಗೆ ಆಫ್ರಿಕಾದಾದ್ಯಂತ ಈಗ ಬಳಕೆಯಾಗುತ್ತಿರುವ ಒಟ್ಟು ವಿದ್ಯುಚ್ಛಕ್ತಿಯ ಪ್ರಮಾಣವನ್ನು ಮೀರುವ ಸಾಧ್ಯತೆಯಿದೆ ಎಂದು ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ (ಐಇಎ) ತನ್ನ ವರದಿಯಲ್ಲಿ ತಿಳಿಸಿದೆ.

ವರ್ಲ್ಡ್ ಎನರ್ಜಿ ಔಟ್ಲುಕ್ 2023 ವರದಿಯಂತೆ ಮುಂದಿನ ಮೂರು ದಶಕಗಳಲ್ಲಿ ಭಾರತದಲ್ಲಿ ವಿದ್ಯುಚ್ಛಕ್ತಿ ಬೇಡಿಕೆಯ ಬೆಳವಣಿಗೆಯು ವಿಶ್ವದ ಯಾವುದೇ ದೇಶ ಅಥವಾ ಪ್ರದೇಶವನ್ನು ಮೀರಿಸಲಿದೆ. ಈ ಅವಧಿಯಲ್ಲಿ ಭಾರತದ ವಾರ್ಷಿಕ ಕಾರ್ಬನ್ ಡೈಯಾಕ್ಸೈಡ್ ಹೊರಸೂಸುವಿಕೆಯೂ ಅತ್ಯಂತ ಹೆಚ್ಚಿನ ಮಟ್ಟದಲ್ಲಿರಲಿದೆ,2050ರ ವೇಳೆಗೆ ಅದು ಸುಮಾರು ಶೇ.30ರಷ್ಟು ಏರಿಕೆಯಾಗಲಿದೆ.

ಕಳೆದ ಐದು ದಶಕಗಳಲ್ಲಿ ಭಾರತದಲ್ಲಿ 700ಕ್ಕೂ ಅಧಿಕ ಉಷ್ಣ ಮಾರುತ ಘಟನೆಗಳು ವರದಿಯಾಗಿದ್ದು,17,000ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಹೀಗಾಗಿ ದೇಶದಲ್ಲಿ ಏಸಿಗಳಿಗಾಗಿ ಬೇಡಿಕೆಯು ಹೆಚ್ಚುತ್ತಲೇ ಇದ್ದು,2010ರಿಂದ ಮೂರು ಪಟ್ಟು ಆಗಿದೆ. ಪ್ರಸಕ್ತ ಪ್ರತಿ 100 ಕುಟುಂಬಗಳ ಪೈಕಿ 24 ಏಸಿಗಳನ್ನು ಹೊಂದಿವೆ ಎಂದು ವರದಿಯು ಹೇಳಿದೆ.

2050ರ ವೇಳೆಗೆ ಏಸಿಗಳಿಗಾಗಿ ಬೇಡಿಕೆಯು ಒಂಭತ್ತು ಪಟ್ಟು ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ. ಅದು ಟಿವಿಗಳು,ಫ್ರಿಝ್ಗಳು ಮತ್ತು ವಾಷಿಂಗ್ ಮಶಿನ್ಗಳು ಸೇರಿದಂತೆ ಇತರ ಪ್ರತಿಯೊಂದೂ ಗೃಹೋಪಕರಣಗಳಿಗೆ ಬೇಡಿಕೆಯನ್ನು ಮೀರಿಸಲಿದೆ ಎಂದೂ ವರದಿಯು ಅಂದಾಜಿಸಿದೆ.

ವಿದ್ಯುತ್ ಬೇಡಿಕೆಯು ತಾಪಮಾನಕ್ಕೆ ಅನುಗುಣವಾಗಿರುತ್ತದೆ ಮತ್ತು ಭಾರತದ ಸಂದರ್ಭದಲ್ಲಿ ತಾಪಮಾನವು 25 ಡಿ.ಸೆ.ಮಿತಿಯನ್ನು ದಾಟುತ್ತಿದ್ದಂತೆ ಬೇಡಿಕೆಯಲ್ಲಿ ತೀವ್ರ ಏರಿಕೆಯಾಗುತ್ತದೆ ಎಂದು ಹೇಳಿರುವ ಐಇಎ,2019 ಮತ್ತು 2022ರ ನಡುವೆ ಏಸಿ,ಏರ್ಕೂಲರ್ಗಳಂತಹ ಒಳಾಂಗಣಗಳನ್ನು ತಂಪಾಗಿಸುವ ಯಂತ್ರಗಳಿಂದಾಗಿವಿದ್ಯುತ್ ಬಳಕೆಯು ಶೇ.21ರಷ್ಟು ಏರಿಕೆಯಾಗಿದೆ ಮತ್ತು ಇಂದು ಸುಮಾರು ಶೇ.10ರಷ್ಟು ಬೇಡಿಕೆ ಇಂತಹ ಯಂತ್ರಗಳಿಂದಲೇ ಬರುತ್ತಿದೆ ಎಂದು ತಿಳಿಸಿದೆ.

ಸೌರ ದ್ಯುತಿವಿದ್ಯುಜ್ಜನಕ (ಸೋಲಾರ್ ಪಿವಿ) ಗಳು ಹಗಲಿನ ಹವಾ ನಿಯಂತ್ರಣ ಅಗತ್ಯಗಳನ್ನು ಪೂರೈಸಬಹುದಾದರೂ ಭಾರತದಲ್ಲಿ ಸಂಜೆ ಮತ್ತು ರಾತ್ರಿಗಳಲ್ಲಿಯೂ ಹವಾನಿಯಂತ್ರಣ ಬೇಡಿಕೆಯು ಗಣನೀಯವಾಗಿರುತ್ತದೆ ಎಂದು ಹೇಳಿರುವ ವರದಿಯು,ಇಂಧನ ದಕ್ಷತೆ ನೀತಿಗಳ ಮೂಲಕ ಹವಾ ನಿಯಂತ್ರಣ ಬೇಡಿಕೆಯನ್ನು ತಗ್ಗಿಸುವುದು ಬ್ಯಾಟರಿಗಳಲ್ಲಿ ಹೂಡಿಕೆ ಅಥವಾ ದುಬಾರಿ ಸ್ಟ್ಯಾಂಡ್ಬೈ ವಿದ್ಯುತ್ ಉತ್ಪಾದನೆಯ ಅಗತ್ಯವನ್ನು ಕಡಿಮೆ ಮಾಡುತ್ತದೆ ಎಂದಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News