ಪೂಂಚ್ ನಲ್ಲಿ ಭಾರತೀಯ ಸೇನಾ ವಾಹನದ ಮೇಲೆ ದಾಳಿ; ಮೃತ ಸೈನಿಕರ ಸಂಖ್ಯೆ ನಾಲ್ಕಕ್ಕೆ ಏರಿಕೆ

Update: 2023-12-22 05:38 GMT

Photo: PTI

ಶ್ರೀನಗರ: ಜಮ್ಮು & ಕಾಶ್ಮೀರದ ರಾಜೌರಿ ಜಿಲ್ಲೆಯ ಪೂಂಚ್ ನಲ್ಲಿ ಗುರುವಾರ ಭಾರತೀಯ ಸೇನೆಯ ಎರಡು ವಾಹನಗಳ ಮೇಲೆ ಉಗ್ರಗಾಮಿಗಳ ಗುಂಪು ನಡೆಸಿದ ದಾಳಿಯಲ್ಲಿ ಮೃತಪಟ್ಟ ಸೈನಿಕರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ದೇರಾ ಕಿ ಗಾಲಿ ಮತ್ತು ಬಲ್ಫಿಯಾಜ್ ನಡುವಿನ ಧಾತ್ಯರ್ ಮೊರಹ್ ಎಂಬಲ್ಲಿ ಕಡಿದಾದ ತಿರುವಿನಲ್ಲಿ ಚಲಿಸುತ್ತಿದ್ದ ವಾಹನಗಳ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಕೆಲ ಕಿಲೋಮೀಟರ್ ದೂರದ ಡಿಕೆಜಿ ಪ್ರದೇಶದಲ್ಲಿ ಉಗ್ರರನ್ನು ಬಂಧಿಸುವ ಕಾರ್ಯಾಚರಣೆಗಾಗಿ ಸೈನಿಕರನ್ನು ಈ ವಾಹನದಲ್ಲಿ ಕರೆದೊಯ್ಯಲಾಗುತ್ತಿತ್ತು ಎಂದು ಸೇನಾ ಮೂಲಗಳು ಹೇಳಿವೆ.

ಬುಧವಾರ ರಾತ್ರಿಯಿಂದಲೇ ಡಿಕೆಜಿ ಪ್ರದೇಶದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ನಡೆಯುತ್ತಿದೆ. ಗುರುವಾರ ಸಂಜೆ 3.45ರ ವೇಳೆಗೆ ಕಾರ್ಯಾಚರಣೆಗಾಗಿ ಎರಡು ವಾಹನಗಳಲ್ಲಿ ಸೇನಾ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದಾಗ ಉಗ್ರರು ದಾಳಿ ನಡೆಸಿದ್ದು, ತಕ್ಷಣವೇ ಭಾರತೀಯ ಸೇನೆ ಪ್ರತಿದಾಳಿ ನಡೆಸಿದೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬರ್ತ್ವಲ್ ಹೇಳಿದ್ದಾರೆ.

"ಹುತಾತ್ಮರಾದ ಸೈನಿಕರು ಸೇನೆಯ 48ನೇ ರಾಷ್ಟ್ರೀಯ ರೈಫಲ್ಸ್ ಯುನಿಟ್ ಗೆ ಸೇರಿದವರಾಗಿದ್ದು, ಇತರ ಮೂವರು ಗಾಯಗೊಂಡಿದ್ದಾರೆ" ಎಂದು ಅವರು ವಿವರಿಸಿದ್ದಾರೆ.

ಕಾರ್ಯಾಚರಣೆ ಮುಂದುವರಿದಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಮೃತಪಟ್ಟ ಅಥವಾ ಗಾಯಗೊಂಡ ಸೈನಿಕರ ಗುರುತು ಅಥವಾ ಶ್ರೇಣಿಯನ್ನು ಸೇನೆ ಬಹಿರಂಗಪಡಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News