ಒಂದೆರಡು ನಿಮಿಷಗಳಿಗೆ ಸಾಕಾಗುವಷ್ಟು ಇಂಧನ ಇರುವಾಗ ಲ್ಯಾಂಡ್ ಆದ ಇಂಡಿಗೋ ವಿಮಾನ!
ಹೊಸದಿಲ್ಲಿ: ಅಯ್ಯೋಧ್ಯೆಯಿಂದ ದಿಲ್ಲಿಗೆ ಹೊರಟಿದ್ದ ಇಂಡಿಗೋ ವಿಮಾನವೊಂದು ಕಳೆದ ಶನಿವಾರ ಹವಾಮಾನ ವೈಪರೀತ್ಯದಿಂದ ಚಂಡೀಗಢದಲ್ಲಿ ಇಳಿಯಬೇಕಾಗಿ ಬಂದಾಗ ವಿಮಾನದಲ್ಲಿ ಒಂದೆರಡು ನಿಮಿಷಗಳವರೆಗೆ ಸಾಕಾಗುವ ಇಂಧನವಿತ್ತು ಎಂದು ಪ್ರಯಾಣಿಕರೊಬ್ಬರು ಆರೋಪಿಸಿದ್ದು ಈ ಘಟನೆ ಸುರಕ್ಷತಾ ವಿಚಾರಕ್ಕೆ ಸಂಬಂಧಿಸಿದಂತೆ ಕಳವಳಕ್ಕೆ ಕಾರಣವಾಗಿದೆ. ಇಂಡಿಗೋ ಪ್ರಮಾಣಿತ ಕಾರ್ಯನಿರ್ವಹಣೆ ಪ್ರಕ್ರಿಯೆಗಳನ್ನು ಉಲ್ಲಂಘಿಸಿರಬಹುದು ಎಂದು ಕೆಲ ಪ್ರಯಾಣಿಕರು ಮತ್ತೋರ್ವ ನಿವೃತ್ತ ಪೈಲಟ್ ಆರೋಪಿಸಿದ್ದಾರೆ.
ಡಿಸಿಪಿ (ಅಪರಾಧ) ಸತೀಶ್ ಕುಮಾರ್ ತಮ್ಮ ಭಯಾನಕ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು. ಈ ನಿರ್ದಿಷ್ಟ ವಿಮಾಣ ಅಯ್ಯೋಧ್ಯೆಯಿಂದ ಅಪರಾಹ್ನ 3.25ಕ್ಕೆ ನಿರ್ಗಮಿಸಿ 4.30ಕ್ಕೆ ದಿಲ್ಲಿ ತಲುಪಬೇಕಿತ್ತು.
ಆದರೆ ದಿಲ್ಲಿ ತಲುಪಲು ಇನ್ನೇನು 15 ನಿಮಿಷಗಳಿವೆ ಎನ್ನುವಾಗ ಅಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಲ್ಯಾಂಡಿಂಗ್ ಆಗಲು ಸಾಧ್ಯವಿಲ್ಲ ಎಂದು ವಿಮಾನದ ಪೈಲಟ್ ಘೋಷಿಸಿದರು. ನಗರದಲ್ಲಿ ಒಂದೆರಡು ಸುತ್ತು ಹೊಡೆದ ವಿಮಾನ ಲ್ಯಾಂಡ್ ಆಗಲು ಎರಡು ಬಾರಿ ಪ್ರಯತ್ನಿಸಿದರೂ ವಿಫಲವಾಯಿತು. 4.15ಕ್ಕೆ ಪ್ರಯಾಣಿಕರಿಗೆ ಮಾಹಿತಿ ನೀಡಿದ ಪೈಲಟ್ ವಿಮಾನದಲ್ಲಿ 45 ನಿಮಿಷಗಳಿಗೆ ಸಾಕಾಗುವಷ್ಟು ಇಂಧನ ಮಾತ್ರ ಇದೆ ಎಂದಿದ್ದರು. ಇದಾಗಿ 75 ನಿಮಿಷಗಳ ನಂತರ, 5.30ಕ್ಕೆ ವಿಮಾನ ಚಂಡೀಗಢದತ್ತ ಸಾಗಲಿದೆ ಎಂದು ಪೈಲಟ್ ಘೋಷಿಸಿದರು. ಆಗ ಹಲವಾರು ಪ್ರಯಾಣಿಕರು ಮತ್ತು ಸಿಬ್ಬಂದಿ ಭಯಗೊಂಡಿದ್ದರು. ಕೊನೆಗೂ ಸಂಜೆ 6.10ಕ್ಕೆ ವಿಮಾನ ಚಂಡೀಗಢದಲ್ಲಿ ಇಳಿದಿದೆ. ಆಗ ವಿಮಾನದಲ್ಲಿ ಒಂದೆರಡು ನಿಮಿಷಗಳಿಗೆ ಸಾಕಾಗುವಷ್ಟು ಇಂಧನವಿತ್ತು ಎಂದು ಸಿಬ್ಬಂದಿಯಿಂದ ತಿಳಿದು ಬಂತು ಎಂದು ಸತೀಶ್ ಕುಮಾರ್ ಹೇಳಿದ್ದಾರೆ.
ನಿಗದಿತ ಪ್ರಕ್ರಿಯೆಗಳನ್ನು ಪಾಲಿಸಲಾಗಿತ್ತೇ ಎಂದು ಡಿಜಿಸಿಎ ಮತ್ತು ನಾಗರಿಕ ವಿಮಾನಯಾನ ಸಚಿವಾಲಯವನ್ನು ಟ್ಯಾಗ್ ಮಾಡಿ ಕುಮಾರ್ ಕೇಳಿದ್ದಾರೆ.