ಯಾವುದೇ ವ್ಯಕ್ತಿ ತಾನು ದೇವರೆಂದು ಘೋಷಿಸಕೂಡದು : ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್
ನಾಗಪುರ : ಯಾರನ್ನಾದರೂ ದೇವರಂತೆ ಪರಿಗಣಿಸಬೇಕೇ ಅಥವಾ ಬೇಡವೇ ಎಂಬುದನ್ನು ಜನರು ನಿರ್ಧರಿಸುತ್ತಾರೆಯೇ ಹೊರತು ವ್ಯಕ್ತಿಯಲ್ಲ ಎಂದು ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಗುರುವಾರ ಹೇಳಿದ್ದಾರೆ.
ಮಣಿಪುರದಲ್ಲಿ ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ್ದ ಆರೆಸ್ಸೆಸ್ ನಾಯಕ ಶಂಕರ್ ದಿನಕರ ಕಾಣೆಯವರ ಜನ್ಮಶತಮಾನೋತ್ಸವದ ಅಂಗವಾಗಿ ಮಹಾರಾಷ್ಟ್ರದ ನಾಗಪುರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
‘‘ನಮ್ಮ ಜೀವನದಲ್ಲಿ ಸಾಧ್ಯವಿದ್ದಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಶ್ರಮಿಸಬೇಕು. ನಮಗೆ ಹೆಸರು ಬರುವುದಿಲ್ಲ ಅಥವಾ ನಮ್ಮನ್ನು ಗಮನಿಸುವುದಿಲ್ಲವೆಂದು ಯಾರೂ ದೂರಿಕೊಳ್ಳಬಾರದು. ಪರಿಶ್ರಮದ ಮೂಲಕ ಪ್ರತಿಯೊಬ್ಬರು ಆರಾಧ್ಯ ವ್ಯಕ್ತಿಗಳಾಗುತ್ತಾರೆ. ಆದರೆ ಆ ಮಟ್ಟವನ್ನು ನಾವು ತಲುಪಿದ್ದೇವಾ ಎಂಬುದನ್ನು ಇತರರು ನಿರ್ಧರಿಸುತ್ತಾರೆಯೇ ಹೊರತು ನಾವಲ್ಲ. ನಾವೇ ದೇವರು ಎಂದು ಯಾರೂ ಕೂಡಾ ಘೋಷಿಸಬಾರದು ’’ ಎಂದು ‘ಭಾಗವತ್ ಹೇಳಿದರು.
‘‘ಕೆಲವು ವ್ಯಕ್ತಿಗಳು ಪ್ರಶಾಂತವಾಗಿ ಇರುವ ಬದಲು ಮಿಂಚಿನಂತೆ ಹೊಳೆಯಬೇಕೆಂದು ಬಯಸುತ್ತಾರೆ. ಆದರೆ ಮಿಂಚು ಹೊಡೆದ ಬಳಿಕ ಮೊದಲಿಗಿಂತಲೂ ಹೆಚ್ಚು ಕತ್ತಲೆಯುಂಟಾಗುತ್ತದೆ. ಹೀಗಾಗಿ ಕಾರ್ಯಕರ್ತರು ದೀಪಗಳಂತೆ ಬೆಳಗಬೇಕು, ಅಗತ್ಯವಿದ್ದಾಗ ಮಾತ್ರವೇ ಅವರು ಪ್ರಜ್ವಲಿಸಬೇಕು’’ ಎಂದು ಭಾಗವತ್ ತಿಳಿಸಿದರು.
ತನ್ನ ಈ ಹೇಳಿಕೆಯು ಯಾವುದೇ ನಿರ್ದಿಷ್ಟ ವ್ಯಕ್ತಿಯನ್ನು ಉದ್ದೇಶಿಸಿದ್ದಾಗಿತ್ತೇ ಎಂಬುದನ್ನು ಭಾಗವತ್ ಅವರು ಸ್ಪಷ್ಟಪಡಿಸಿಲ್ಲ. ಆದರೆ ತಾನು ಜೈವಿಕವಾಗಿ ಜನಿಸಿದವನಲ್ಲ ಎಂದು ಪ್ರಧಾನಿ ಮೋದಿಯವರು ಈ ಹಿಂದೆ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಅವರು ಪರೋಕ್ಷವಾಗಿ ಪ್ರಸ್ತಾವಿಸಿದ್ದಾರೆನ್ನಲಾಗಿದೆ.
ಹಿಂಸಾಚಾರ ಪೀಡಿತ ಮಣಿಪುರದ ಪ್ರಸಕ್ತ ಪರಿಸ್ಥಿತಿ ಅತ್ಯಂತ ಕಷ್ಟಕರ ಹಾಗೂ ಸವಾಲುದಾಯಕವಾಗಿದೆಯೆಂದು ಭಾಗವತ್ ಕಳವಳ ವ್ಯಕ್ತಪಡಿಸಿದರು. ಮಣಿಪುರದಲ್ಲಿ ಯಾರ ಸುರಕ್ಷತೆಯ ಖಾತರಿಯೂ ಇಲ್ಲ. ಉದ್ಯಮ ಹಾಗೂ ಸಮಾಜ ಸೇವೆಗಾಗಿ ಹೋದವರ ಬದುಕು ಇನ್ನಷ್ಟು ಸವಾಲುದಾಯಕವಾಗಿದೆ ಎಂದವರು ಹೇಳಿದರು.
ಮಣಿಪುರ ಹಿಂಸಾಚಾರವು 200ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿದ್ದು, 6 ಸಾವಿರಕ್ಕೂ ಅಧಿಕ ಮಂದಿಯನ್ನು ನಿರಾಶ್ರಿತರನ್ನಾಗಿಸಿದೆ. ಆದಾಗ್ಯೂ ನೂರಾರು ಆರೆಸ್ಸೆಸ್ ಕಾರ್ಯಕರ್ತರು ಅಲ್ಲಿ ದೃಢವಾಗಿ ಅಲ್ಲಿಯೇ ನೆಲೆನಿಂತು, ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.
‘‘ ನಾನು ಜೈವಿಕವಾಗಿ ಜನಿಸಿದವನಲ್ಲವೆಂದು ನನ್ನ ತಾಯಿಯ ಜೀವಂತವಾಗಿದ್ದಾಗಲೇ ಯೋಚಿಸುತ್ತಿದ್ದೆ. ನನ್ನ ತಾಯಿಯ ನಿಧನದ ಬಳಿಕ ನಾನು ದೇವರಿಂದ ಕಳುಹಿಸಲ್ಪಟ್ಟವನೆಂದು ನನಗೆ ಮನವರಿಕೆಯಾಯಿತು. ಈ ಶಕ್ತಿಯು ನನಗೆ ದೇಹದಿಂದ ಬಂದುದಲ್ಲ. ದೇವರೇ ಅದನ್ನು ಕೊಟ್ಟಿದ್ದಾನೆ’’ ಎಂದು ಮೋದಿ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭ ಹೇಳಿದ್ದರು.
ಮೋದಿಯವರ ಈ ಹೇಳಿಕೆಯನ್ನು ಪ್ರತಿಪಕ್ಷ ಕಾಂಗ್ರೆಸ್ ತೀವ್ರವಾಗಿ ಟೀಕಿಸಿತ್ತು. ಜೂನ್ ತಿಂಗಳ ಆರಂಭದಲ್ಲಿ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಆರೆಸ್ಸೆಸ್ ನ ಹಲವು ನಾಯಕರು ಬಿಜೆಪಿಯ ನಾಯಕತ್ವವನ್ನು ಹಾಗೂ ಅದರ ಕಾರ್ಯವೈಖರಿಯನ್ನು ಟೀಕಿಸಿ ಹೇಳಿಕೆಗಳನ್ನು ನೀಡಿದ್ದರು.
ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಅವರು ಜೂನ್ 13ರಂದು ಹೇಳಿಕೆಯೊಂದನ್ನು ನೀಡಿ, ಉದ್ದಟತನದ ಕಾರಣದಿಂದಾಗಿ ಬಹುಮತವನ್ನು ಗಳಿಸುವಲ್ಲಿ ಬಿಜೆಪಿ ವಿಫಲವಾಗಿತ್ತು ಎಂದರು.