ಕೇರಳ | ಮಿದುಳು ತಿನ್ನುವ ಅಮೀಬಾ ಸೋಂಕಿಗೆ ತುತ್ತಾಗಿದ್ದ ಐದು ವರ್ಷದ ಬಾಲಕಿ ಮೃತ್ಯು
ಮಲಪ್ಪುರಂ (ಕೇರಳ): ಕಲುಷಿತ ನೀರಿನಲ್ಲಿ ಮುಕ್ತವಾಗಿ ಜೀವಿಸುವ ಅಮೀಬಾದಿಂದ ಉಂಟಾಗುವ ವಿರಳ ಮಿದುಳು ಸೋಂಕಾದ ಮೆನಿಂಜೊಸೆಫಲೈಟಿಸ್ ಗೆ ತುತ್ತಾಗಿದ್ದ ಐದು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ ಎಂದು ಮಂಗಳವಾರ ಮೂಲಗಳು ತಿಳಿಸಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ಹೆರಿಗೆ ಮತ್ತು ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಒಂದು ವಾರಕ್ಕಿಂತ ಹೆಚ್ಚು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಮೂನ್ನಿಯೂರ್ ಪಂಚಾಯತ್ ನಿವಾಸಿಯಾದ ಬಾಲಕಿಯು ಸೋಮವಾರ ರಾತ್ರಿ ಮೃತಪಟ್ಟಿದ್ದಾಳೆ ಎಂದು ಅವರು ತಿಳಿಸಿದ್ದಾರೆ.
ವೈದ್ಯಕೀಯ ತಜ್ಞರ ಪ್ರಕಾರ, ಕಲುಷಿತ ನೀರಿನಲ್ಲಿ ಮುಕ್ತವಾಗಿ ಜೀವಿಸುವ, ಪರಾವಲಂಬಿಯಲ್ಲದ ಅಮೀಬಾ ಬ್ಯಾಕ್ಟೀರಿಯಾವು ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ಈ ಸೋಂಕು ಉಂಟಾಗುತ್ತದೆ.
ಮೇ 1ರಂದು ಮನೆಯ ಹತ್ತಿರದ ಕೊಳವೊಂದರಲ್ಲಿ ಸ್ನಾನ ಮಾಡಿದ್ದ ಬಾಲಕಿಗೆ ಮೇ 10ರ ವೇಳೆಗೆ ಜ್ವರ, ತಲೆನೋವು ಹಾಗೂ ವಾಂತಿಯಂಥ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದವು ಎಂದು ಮೂಲಗಳು ಹೇಳಿವೆ.
ಬಾಲಕಿಗೆ ವೆಂಟಿಲೇಟರ್ ನೆರವು ಒದಗಿಸಲಾಗಿತ್ತು ಹಾಗೂ ಆಕೆ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ ಎಂದು ಹೇಳಲಾಗಿದೆ.