ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಪ್ರಕರಣ: ಗುಪ್ತಚರ ಅಧಿಕಾರಿ ಅನಿಮೇಶ್ ಮಂಡಲ್ ಬಂಧನ
ಹೊಸದಿಲ್ಲಿ: ಕಳೆದ ತಿಂಗಳು ನಾಗ್ಪುರದಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದ್ದು, ಆರೋಪಿಯನ್ನು ಇಂಟೆಲಿಜೆನ್ಸ್ ಬ್ಯೂರೋ(ಐಬಿ) ಅಧಿಕಾರಿ ಎಂದು ಗುರುತಿಸಲಾಗಿದೆ.
ನಾಗ್ಪುರದಿಂದ ಕೋಲ್ಕತ್ತಾಗೆ 187 ಪ್ರಯಾಣಿಕರನ್ನು ಹೊತ್ತು ತೆರಳುತ್ತಿದ್ದ ವಿಮಾನವನ್ನು ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ರಾಯ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ವಿಮಾನವನ್ನು ಪೊಲೀಸರು ಸಂಫೂರ್ಣವಾಗಿ ಶೋಧ ನಡೆಸಿದಾಗ ಬಾಂಬ್ ಬೆದರಿಕೆ ಸುಳ್ಳು ಎನ್ನುವುದು ಬಯಲಾಗಿತ್ತು.
ಬಂಧಿತ ಆರೋಪಿಯನ್ನು ಅನಿಮೇಶ್ ಮಂಡಲ್ ಎಂದು ಗುರುತಿಸಲಾಗಿದೆ. ಈತ ಡೆಪ್ಯುಟಿ ಸೂಪರಿಂಟೆಂಡೆಂಟ್ ಶ್ರೇಣಿಯ IB ಅಧಿಕಾರಿಯಾಗಿದ್ದು, ಆತನನ್ನು ನಾಗ್ಪುರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅನಿಮೇಶ್ ಮಂಡಲ್ ಬಂಧಿಸಿದ ರಾಯ್ಪುರ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 351(4) ಸೇರಿದಂತೆ ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಯ್ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸಿದ್ದು, ಅನಿಮೇಶ್ ಮಂಡಲ್ ಬಂಧನವನ್ನು ಸಮರ್ಥಿಸಿಕೊಂಡಿದ್ದಾರೆ. ಮಂಡಲ್ ಗೆ ವಶಕ್ಕೆ ಪಡೆದ ತಕ್ಷಣವೇ ಐಬಿಗೆ ಮಾಹಿತಿ ನೀಡಲಾಗಿದೆ. ಐಬಿ ಮತ್ತು ಸ್ಥಳೀಯ ಪೊಲೀಸರ ಜಂಟಿ ವಿಚಾರಣೆಯ ನಂತರ ಮಂಡಲ್ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.