ಕಾನೂನಿನ ಬಗ್ಗೆ ನಮ್ಮ ದೇಶ ಯಾರಿಂದಲೂ ಪಾಠ ಕಲಿಯಬೇಕಿಲ್ಲ: ಜಗದೀಪ್ ಧನ್ಕರ್
ಹೊಸದಿಲ್ಲಿ: ಭಾರತ ವಿಶಿಷ್ಟ ಪ್ರಜಾಪ್ರಭುತ್ವ ವ್ಯವಸ್ಥೆ; ಕಾನೂನಿನ ಬಗ್ಗೆ ನಮ್ಮ ದೇಶ ಯಾರಿಂದಲೂ ಪಾಠ ಕಲಿಯಬೇಕಿಲ್ಲ ಎಂದು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ ಬಗ್ಗೆ ಜರ್ಮನಿ, ಅಮೆರಿಕದ ಬಳಿಕ ವಿಶ್ವಸಂಸ್ಥೆ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಧನ್ಕರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕೇಜ್ರಿ ಬಂಧನ ಹಾಗೂ ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವ ಬಗ್ಗೆ ಅಮೆರಿಕ ಹಾಗೂ ವಿಶ್ವಸಂಸ್ಥೆಯ ಪ್ರತಿನಿಧಿಗಳಿಗೆ ಎದುರಾದ ಪ್ರಶ್ನೆಗಳಿಗೆ ಉತ್ತರಿಸಿದ್ದು, ಭಾರತದ ಮುನಿಸಿಗೆ ಕಾರಣವಾಗಿದೆ.
ಶುಕ್ರವಾರ ಸಮಾರಂಭವೊಂದರಲ್ಲಿ ಮಾತನಾಡಿದ ಧನ್ಕರ್, "ಭಾರತ ಆಕರ್ಷಕ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದ ಪ್ರಜಾಪ್ರಭುತ್ವ. ಯಾವುದೇ ವ್ಯಕ್ತಿ ಅಥವಾ ಗುಂಪಿನ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಕಾನೂನಿನ ಬಗ್ಗೆ ಯಾರಿಂದಲೂ ಭಾರತ ಪಾಠ ಕಲಿಯಬೇಕಿಲ್ಲ" ಎಂದು ಹೇಳಿದರು.
ಭಾರತದಲ್ಲಿ ಕಾನೂನಿನ ಎದುರು ಎಲ್ಲರೂ ಸಮಾನರು ಮತ್ತು ಕಾನೂನಿನಿಂದ ಮೇಲು ಎಂದು ಭಾವಿಸುವವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಚುಚ್ಚಿದರು.
ಕೇಜ್ರಿ ಬಂಧನ ವಿರೋಧಿಸಿ ಭಾನುವಾರ ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿ, "ನಾವು ಏನು ನೋಡುತ್ತಿದ್ದೇವೆ? ಕಾನೂನು ತಮ್ಮ ಕ್ರಮ ಕೈಗೊಂಡ ತಕ್ಷಣ ಇವರು ಬೀದಿಗೆ ಬರುತ್ತಾರೆ. ದೊಡ್ಡ ಚರ್ಚೆಗಳನ್ನು ಮಾಡುತ್ತಾರೆ. ಮಾನವ ಹಕ್ಕುಗಳ ಸಂಘಟನೆಗಳು ಬೊಬ್ಬೆ ಹಾಕುತ್ತವೆ. ಇದು ನಮ್ಮೆದುರು ನಡೆಯುತ್ತಿರುವುದು" ಎಂದು ಹೇಳಿದರು.
ಅಮರಿಕ ಹಾಗೂ ಜರ್ಮನಿಯ ಪ್ರತಿಕ್ರಿಯೆ ಬಳಿಕ ಉಭಯ ರಾಷ್ಟ್ರಗಳ ರಾಜತಾಂತ್ರಿಕ ಸಿಬ್ಬಂದಿಯನ್ನು ಕರೆಸಿಕೊಂಡ ಸರ್ಕಾರ, ಇದು ಅನಪೇಕ್ಷಿತ, ಪಕ್ಷಪಾತದಿಂದ ಕೂಡಿದ್ದು ಹಾಗೂ ಸ್ವೀಕಾರಾರ್ಹವಲ್ಲದ್ದು ಎಂದು ಸ್ಪಷ್ಟಪಡಿಸಿತ್ತು. ಆದರೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಅವರ ವಕ್ತಾರರು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ.