ಅಧ್ಯಕ್ಷರಾದ ನಂತರ ಇದೇ ಪ್ರಥಮ ಬಾರಿಗೆ ಭಾರತಕ್ಕೆ ಆಗಮಿಸಿದ ಜೋ ಬೈಡನ್

Update: 2023-09-08 15:12 GMT

ಅಮೆರಿಕಾದ ಅಧ್ಯಕ್ಷ ಜೋ ಬೈಡನ್ Photo- PTI

ಹೊಸದಿಲ್ಲಿ: ಅಮೆರಿಕಾದ ಅಧ್ಯಕ್ಷ ಜೋ ಬೈಡನ್, ವಾರಾಂತ್ಯದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಶುಕ್ರವಾರ ಸಂಜೆ ದಿಲ್ಲಿಗೆ ಆಗಮಿಸಿದರು. ಸಂಜೆ 7 ಗಂಟೆಗೂ ಮುನ್ನ ಜೋ ಬೈಡನ್ ಅವರ ವಿಮಾನವಾದ ಏರ್ ಫೋರ್ಸ್ ಒನ್ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ನಂತರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿರುವ ಜೋ ಬೈಡನ್, ಯುದ್ಧ ವಿಮಾನ ಎಂಜಿನ್ ಗಳ ಖರೀದಿ ಒಪ್ಪಂದ, ಪ್ರಿಡೇಟರ್ ಡ್ರೋನ್ ಗಳ ಖರೀದಿ ಹಾಗೂ ಸಂಕೀರ್ಣ ತಂತ್ರಜ್ಞಾನಗಳಾದ 5ಜಿ ಹಾಗೂ 6ಜಿ ಅಂತರ್ಜಾಲ ಸೇವೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ. 

ಪ್ರಮುಖ ರೈಲು ಖರೀದಿ ಒಪ್ಪಂದದ ಕುರಿತು ಮಾತುಕತೆ ನಡೆಯುವ ಸಾಧ್ಯತೆ ಇದೆಯಾದರೂ, ಅಮೆರಿಕಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್ ಈ ವರದಿಗಳನ್ನು ದೃಢಪಡಿಸಿಲ್ಲ. ಹೀಗಿದ್ದೂ, ಅಮೆರಿಕಾ ಹೂಡಿಕೆ ಮಾಡಲಿರುವ ಈ ಉಪಕ್ರಮದ ಕುರಿತು ಸುಳಿವು ನೀಡಿದರು. “ಭಾರತ-ಮಧ್ಯಪ್ರಾಚ್ಯದಿಂದ ಯೂರೋಪ್ ವರೆಗಿನ ಸಂಪರ್ಕ ಜಾಲವು ಅತ್ಯಂತ ಪ್ರಮುಖವಾಗಿದ್ದು, ಈ ಜಾಲದಲ್ಲಿ ಭಾಗಿಯಾಗಲಿರುವ ಎಲ್ಲ ದೇಶಗಳಿಗೂ ಗಮನಾರ್ಹ ಸಂಖ್ಯೆಯ ಆರ್ಥಿಕತೆಯೊಂದಿಗೆ ವ್ಯೂಹಾತ್ಮಕ ಲಾಭಗಳನ್ನು ತರಲಿದೆ” ಎಂದು ಅವರು ಹೇಳಿದ್ದಾರೆ. 

ಭಾರತಕ್ಕೆ ಆಗಮಿಸುವುದಕ್ಕೂ ಮುನ್ನ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದ ಜೋ ಬೈಡನ್, “ಜಿ-20 ಸದಸ್ಯರಾದ ನಾವೆಲ್ಲ ಒಟ್ಟು ಸೇರಿದಾಗಲೆಲ್ಲ ನಾವು ಉತ್ತಮವಾದುದನ್ನು ಪಡೆಯುತ್ತೇವೆ. ಅಂತಾರಾಷ್ಟ್ರೀಯ ಆರ್ಥಿಕ ಸಹಕಾರದ ಉನ್ನತ ವೇದಿಕೆಯಾದ ಜಿ-20 ಶೃಂಗಸಭೆಗೆ ನಾನು ತೆರಳುತ್ತಿದ್ದು, ಅಮೆರಿಕಾ ಆದ್ಯತೆಗಳ ಪ್ರಗತಿ, ಅಭಿವೃದ್ಧಿಶೀಲ ದೇಶಗಳಿಗೆ ನೆರವು ನೀಡುವುದು ಹಾಗೂ ಇದನ್ನು ಸಾಧಿಸಬಲ್ಲ ವೇದಿಕೆಯಾಗಿರುವ ಜಿ-20ಗೆ ನಮ್ಮ ಬದ್ಧತೆಯನ್ನು ಪ್ರದರ್ಶಿಸುವುದರತ್ತ ನಮ್ಮ ಗಮನ ಹರಿಸಿದ್ದೇವೆ” ಎಂದು ಬರೆದುಕೊಂಡಿದ್ದಾರೆ. 

ದಿಲ್ಲಿಗೆ ಆಗಮಿಸಿರುವ ಜೋ ಬೈಡನ್, ನಗರದಲ್ಲಿನ ಅತ್ಯಂತ ಐಷಾರಾಮಿ ಐಟಿಸಿ ಮೌರ್ಯ ಶೆರಟಾನ್ ಹೋಟೆಲ್ ನಲ್ಲಿ ಉಳಿದುಕೊಳ್ಳಲಿದ್ದಾರೆ. 

ಭಾರತಕ್ಕೆ ಆಗಮಿಸುವುದಕ್ಕೂ ಮುನ್ನ 80 ವರ್ಷ ವಯಸ್ಸಿನ ಜೋ ಬೈಡನ್ ಅವರಿಗೆ ನಡೆಸಲಾದ ಕೋವಿಡ್ ಪರೀಕ್ಷೆಯಲ್ಲಿ ಋಣಾತ್ಮಕ ಫಲಿತಾಂಶ ಬಂದಿತ್ತು. 

ಇದಕ್ಕೂ ಮುನ್ನ, ಕೋವಿಡ್ ಪರೀಕ್ಷೆಗೆ ಒಳಗಾಗಿದ್ದ ಜೋ ಬೈಡನ್ ಪತ್ನಿ ಜಿಲ್ ಬೈಡನ್ ಅವರು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದ್ದರಿಂದ ಜೋ ಬೈಡನ್ ಅವರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News