ರಾಮ್ ಲೀಲಾ ಮೈದಾನದಲ್ಲಿ ಇಂದು ಕಿಸಾನ್ ಮಹಾಪಂಚಾಯತ್
ಹೊಸದಿಲ್ಲಿ: ದೆಹಲಿಯ ರಾಮಲೀಲಾ ಮೈದಾನದಲ್ಲಿ ಗುರುವಾರ ಸಂಯುಕ್ತ ಕಿಸಾನ್ ಮೋರ್ಚಾ ಕಿಸಾನ್ ಮಜ್ದೂರ್ ಮಹಾಪಂಚಾಯತ್ ಆಯೋಜಿಸಿದ್ದು, ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಹೋರಾಟ ತೀವ್ರಗೊಳಿಸುವ ಸಂಬಂಧ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.
ಮಹಾಪಂಚಾಯತ್ನಲ್ಲಿ 5 ಸಾವಿರಕ್ಕಿಂತ ಹೆಚ್ಚು ರೈತರು ಸೇರಬಾರದು. ಯಾವುದೇ ಟ್ರ್ಯಾಕ್ಟರ್ ಟ್ರಾಲಿಗಳನ್ನು ಸಮಾವೇಶ ಸ್ಥಳಕ್ಕೆ ತರಬಾರದು ಎಂಬ ಷರತ್ತುಗಳೊಂದಿಗೆ ದೆಹಲಿ ಪೊಲೀಸರು ಇದಕ್ಕೆ ಒಪ್ಪಿಗೆ ನೀಡಿದ್ದಾರೆ.
ಆದರೆ 2020-21ರ ರೈತರ ಹೋರಾಟದ ನೇತೃತ್ವ ವಹಿಸಿದ್ದ ಎಸ್ಕೆಎಂ ಪ್ರಕಾರ, 50 ಸಾವಿರಕ್ಕೂ ಹೆಚ್ಚು ಮಂದಿ ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಶಾಂತಿಯುತವಾಗಿ ರೈತರು ರಾಮಲೀಲಾ ಮೈದಾನದಲ್ಲಿ ಸಭೆ ನಡೆಸಲಿದ್ದಾರೆ ಎಂದು ಎಸ್ಕೆಎಂ ಹೇಳಿದೆ.
800ಕ್ಕೂ ಹೆಚ್ಚು ಬಸ್ಸುಗಳು, ಟ್ರಕ್ ಹಾಗೂ ರೈಲುಗಳಲ್ಲಿ ಪಂಜಾಬಿನ ರೈತರು ದೆಹಲಿಯತ್ತ ಧಾವಿಸಿದ್ದಾರೆ. ಇದರಿಂದಾಗಿ ದೆಹಲಿಯ ವಿವಿಧ ಕಡೆಗಳಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.