ಕೇರಳದ ಕೋಝಿಕ್ಕೋಡ್‌ನ ಕೊಯಿಲಾಂಡಿ ಬಳಿ ಭಾರತೀಯ ಸಿಬ್ಬಂದಿಗಳಿದ್ದ ಇರಾನ್ ದೋಣಿಯನ್ನು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್
ಕೋಝಿಕ್ಕೋಡ್ : ತಮಿಳುನಾಡಿನ ಕನ್ಯಾಕುಮಾರಿ ಮೂಲದ ಆರು ಭಾರತೀಯ ಸಿಬ್ಬಂದಿಗಳಿದ್ದ ಇರಾನ್ ಮೀನುಗಾರಿಕಾ ಹಡಗನ್ನು ಕೋಯಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿಯಿಂದ 20 ನಾಟಿಕಲ್ ಮೈಲುಗಳಷ್ಟು ದೂರದಲ್ಲಿರುವ ಬೇಪ್ಪೂರ್‌ನ ಪಶ್ಚಿಮಕ್ಕೆ ಕೇರಳ ಕರಾವಳಿಯತ್ತ ಸಾಗುತ್ತಿದ್ದಾಗ ಕೋಸ್ಟ್ ಗಾರ್ಡ್ ರವಿವಾರ ವಶಕ್ಕೆ ಪಡೆದು ಕೊಂಡಿದೆ ಎಂದು ವರದಿಯಾಗಿದೆ.
ಈ ಕುರಿತು ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಇಂಡಿಯನ್ ಕೋಸ್ಟ್ ಗಾರ್ಡ್, ಕಾರ್ಯಾಚರಣೆಗೆ ಹಡಗು ಮತ್ತು ಹೆಲಿಕಾಪ್ಟರ್ ಅನ್ನು ಬಳಸಲಾಗಿತ್ತು ಎಂದು ಹೇಳಿದೆ. ವಶಕ್ಕೆ ತೆಗೆದುಕೊಂಡ ಬಳಿಕ ಹೆಚ್ಚಿನ ತನಿಖೆ ಮತ್ತು ಕಾನೂನು ಪ್ರಕ್ರಿಯೆಗಳಿಗಾಗಿ ದೋಣಿಯನ್ನು ಕೊಚ್ಚಿಗೆ ತರಲಾಗಿದೆ ಎಂದು ತಿಳಿದು ಬಂದಿದೆ.
ಕೋಸ್ಟ್ ಗಾರ್ಡ್‌ಗೆ ದೊರೆತ ಪ್ರಾಥಮಿಕ ಮಾಹಿತಿಯಂತೆ ದೋಣಿಯು ಇರಾನ್ ಮೂಲದ ಒಡೆತನದಲ್ಲಿದೆ ಎಂದು ತಿಳಿದುಬಂದಿದೆ. ಅಲ್ಲಿನ ಪ್ರಾಯೋಜಕರು ತಮ್ಮ ದೋಣಿಯಲ್ಲಿ ಇರಾನ್ ಕರಾವಳಿಯಲ್ಲಿ ಮೀನುಗಾರಿಕೆ ನಡೆಸಲು ವೀಸಾಗಳನ್ನು ನೀಡುವ ಮೂಲಕ ಕನ್ಯಾಕುಕುಮಾರಿಯಿಂದ ಆರು ಮೀನುಗಾರರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿದ್ದರು ಎನ್ನಲಾಗಿದೆ.
ನೇಮಕಗೊಂಡ ದಿನದಿಂದ ತಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಸಿಬ್ಬಂದಿಗಳು ಕೋಸ್ಟ್ ಗಾರ್ಡ್‌ಗೆ ತಿಳಿಸಿದ್ದಾರೆ. ಅವರಿಗೆ ಮೂಲಭೂತ ಅವಶ್ಯಕತೆಗಳನ್ನೂ ಪ್ರಾಯೋಜಕರು ಒದಗಿಸಿಲ್ಲ ಎನ್ನಲಾಗಿದೆ. ಅಲ್ಲದೇ ಅವರ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ. ಸಂಕಷ್ಟದಿಂದ ಪಾರಾಗಲು ಮೀನುಗಾರರು ತಾವು ಕೆಲಸ ಮಾಡುತ್ತಿದ್ದ ದೋಣಿಯನ್ನು ಬಳಸಿಕೊಂಡು ಇರಾನ್‌ನಿಂದ ಭಾರತಕ್ಕೆ ಪರಾರಿಯಾಗಲು ನಿರ್ಧರಿಸಿ ಪ್ರಯಾಣ ಬೆಳೆಸಿದ್ದರು ಎಂದು ತಿಳಿದು ಬಂದಿದೆ.