ಇಂಡಿಯಾ ಮೈತ್ರಿಕೂಟ ನಾಯಕರು ಗೋಮೂತ್ರ ಸೇವಿಸಿ ವಿಶ್ವಾಸ ಗೆಲ್ಲಲಿ
ಹೊಸದಿಲ್ಲಿ: ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾಗೆ ಹಿಂದೂಗಳ ಹೃದಯವನ್ನು ಗೆಲ್ಲುವ ಬಯಕೆ ಇದ್ದರೆ, ಅದು ‘ಗೋ ಮೂತ್ರ’ ಪಾರ್ಟಿಗಳನ್ನು ಆಯೋಜಿಸಬೇಕು ಹಾಗೂ ಅದರ ನಾಯಕರು ಗೋಮೂತ್ರ ಸೇವಿಸಬೇಕೆಂಬ ವಿಚಿತ್ರ ಸಲಹೆಯನ್ನು ಅಖಿಲ ಭಾರತ ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್ ನೀಡಿದ್ದಾರೆ.
ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು ಮೈತ್ರಿಕೂಟವನ್ನು ಏರ್ಪಡಿಸಿಕೊಳ್ಳಲು ಒಗ್ಗೂಡಿರುವ ಪಕ್ಷಗಳೆಲ್ಲವೂ ಹಿಂದೂ ವಿರೋಧಿ ಎಂದು ಟೀಕಿಸಿದರು. ‘‘ ದುರ್ಗಾಪೂಜೆ ಸೇರಿದಂತೆ ಹಿಂದೂ ಹಬ್ಬಗಳಿಗೆ ಶಾಲೆಗಳಲ್ಲಿ ರಜೆ ನೀಡುವುದನ್ನು ಬಿಹಾರ ನಿಲ್ಲಿಸಿದೆ. ಪಶ್ಚಿಮಬಂಗಾಳದಲ್ಲಿ ಹಿಂದೂಗಳ ಹತ್ಯೆಯಾಗುತ್ತಿದೆ. ಸಮಾಜವಾದಿ ಪಕ್ಷದ ಸ್ವಾಮಿ ಪ್ರಸಾದ್ ವೌರ್ಯ ಅವರು ಹಿಂದೂಧರ್ಮದ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ನಿರಂತರವಾಗಿ ಸನಾತನಧರ್ಮವನ್ನು ನಿಂದನೆಗೆ ಗುರಿಪಡಿಸುತ್ತಾರೆ. ಶ್ರೀರಾಮನು ಅಸ್ವಿತ್ವದಲ್ಲಿಯೇ ಇರಲಿಲ್ಲವೆಂದು ಕಾಂಗ್ರೆಸ್ ಹೇಳುತ್ತದೆ. ದಿಲ್ಲಿಯಲ್ಲಿ ವೌಲ್ವಿಗಳಿಗೆ ವೇತನ ದೊರೆಯುತ್ತಿದೆ. ಆದರೆ ಅರ್ಚಕರಿಗಿಲ್ಲ’’ ಎಂದು ಅವರು ಹೇಳಿದರು.
ಇಂಡಿಯಾ ಮೈತ್ರಿಕೂಟದ ಮೇಲೆ ಹಿಂದೂಗಳು ನಂಬಿಕೆಯಿಡುವುದಕ್ಕೆ ಯಾವುದೇ ಕಾರಣ ಕಂಡುಬರುತ್ತಿಲ್ಲ. ಆದರೂ, ಅಂತರಾಳದ ಕರೆಗೆ ಓಗೊಟ್ಟು ಅದು ಗೋಮೂತ್ರ ಪಾರ್ಟಿಗಳನ್ನು ಆಯೋಜಿಸಬೇಕು. ಅವುಗಳಲ್ಲಿ ಮೈತ್ರಿಕೂಟದ ನಾಯಕರು ಗೋಮೂತ್ರ ಸೇವಿಸುವ ಮೂಲಕ ತಮ್ಮ ಯೋಗ್ಯತೆಯನ್ನು ಸಾಬೀತುಪಡಿಸಬೇಕು ಎಂದು ಅವರು ಕರೆ ನೀಡಿದರು.
‘‘ನೀವು ಹಲವಾರು ಇಫ್ತರ್ ಕೂಟಗಳನ್ನು ಆಯೋಜಿಸುತ್ತೀರಿ ಹಾಗೂ ಅವುಗಳಲ್ಲಿ ಭಾಗವಹಿಸುತ್ತೀರಿ. ಹೀಗಿರುವಾಗ ನೀವು ಯಾಕೆ ಗೋಮೂತ್ರ ಪಾರ್ಟಿಯನ್ನು ಏರ್ಪಡಿಸುವುದಿಲ್ಲ’’ ಎಂದವರು ಇಂಡಿಯಾ ನಾಯಕರನ್ನು ಪ್ರಶ್ನಿಸಿದ್ದಾರೆ.
ಗೋಮೂತ್ರಕ್ಕೆ ಯಾವುದೇ ರೋಗವನ್ನು ಬಗೆಹರಿಸುವ ಶಕ್ತಿಯಿದೆಯೆಂದು ಪ್ರತಿಪಾದಿಸುವ ಚಕ್ರಪಾಣಿ ಮಹಾರಾಜ್ ಅವರು ಕೋವಿಡ್19 ಹಾವಳಿಯ ಗೋಮೂತ್ರ ಸೇವನೆಯ ಕೂಟಗಳನ್ನು ಆಯೋಜಿಸಿದ್ದರು.
‘‘ಗೋವು ನಮ್ಮ ತಾಯಿ. ಅದು ಇಡೀ ಜಗತ್ತಿನ ತಾಯಿಯೂ ಆಗಿದೆ. ಗೋವಿನಲ್ಲಿ ನಮ್ಮೆಲ್ಲಾ ದೇವ, ದೇವತೆಗಳಿರುತ್ತಾರೆ. ಗೋವಿನ ಆಶೀರ್ವಾದದಿಂದಾಗಿಯೇ ಜಗತ್ತು ಕೋವಿಡ್ ಸೋಂಕಿನಿಂದ ಮುಕ್ತವಾಯಿತು’’ ಎಂದು ಅವರು ಹೇಳಿದರು.
‘ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣಕ್ಕೆ ನಿಮ್ಮ ಕೊಡುಗೆ ಏನು’ ಎಂದು ಪ್ರತಿಪಕ್ಷಗಳನ್ನು ಪ್ರಶ್ನಿಸಿದ ಅವರು ಒಂದು ವೇಳೆ ನೀವು ಅಧಿಕಾರಕ್ಕೆ ಬಂದಲ್ಲಿ ಹಿಂದೂಗಳ ವಿರುದ್ಧ ತಾರತಮ್ಯವೆಸಗುವುದಿಲ್ಲ ಹಾಗೂ ಮುಸ್ಲಿಮರ ತುಷ್ಟೀಕರಣ ನಡೆಸುವುದಿಲ್ಲವೆಂಬುದನ್ನು ಹಿಂದೂಗಳು ಹೇಗೆ ನಂಬಲು ಸಾಧ್ಯ?ʼ ಎಂದು ಅವರು ಪ್ರಶ್ನಿಸಿದರು.