ಧರ್ಮ, ರಾಜಕೀಯದ ನಡುವಿನ ಗೆರೆ ಮಸುಕಾಗುತ್ತಿದೆ: ಪಿಣರಾಯಿ ವಿಜಯನ್
ತಿರುವನಂತಪುರ : ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ರಾಷ್ಟ್ರ ಭಾಗಿಯಾಗಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಧರ್ಮ ಹಾಗೂ ರಾಷ್ಟ್ರದ ನಡುವಿನ ಗೆರೆ ಮಸುಕಾಗುತ್ತಿರುವಂತೆ ಕಾಣುತ್ತಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನೆರವೇರಿಸಿದ ಬಳಿಕ ಪಿಣರಾಯಿ ವಿಜಯನ್ ಅವರು, ಧಾರ್ಮಿಕ ಆರಾಧನೆಯ ಸ್ಥಳದಲ್ಲಿ ನಡೆಯುವ ಸಮಾರಂಭವನ್ನು ರಾಷ್ಟ್ರದ ಕಾರ್ಯಕ್ರಮವಾಗಿ ಆಚರಿಸುವುದು ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಭಾರತದ ಜಾತ್ಯತೀತತೆ ಎಂದರೆ ಧರ್ಮ ಹಾಗೂ ರಾಷ್ಟ್ರದ ಪ್ರತ್ಯೇಕತೆ. ಆ ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳುವ ಸಂಪ್ರದಾಯವನ್ನು ನಾವು ಹೊಂದಿದ್ದೇವೆ. ಆದರೆ, ಈಗ ಧರ್ಮ ಹಾಗೂ ರಾಷ್ಟ್ರವನ್ನು ಪ್ರತ್ಯೇಕಿಸುವ ಗೆರೆ ತೆಳುವಾದಂತೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.
ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಧರ್ಮ ಹಾಗೂ ರಾಷ್ಟ್ರ ಬೇರ್ಪಟ್ಟಿರುವುದು ಭಾರತೀಯ ಜಾತ್ಯತೀತತೆಯ ನಿರ್ಣಾಯಕ ಅಂಶ ಎಂದು ಆಗಾಗ ಒತ್ತಿ ಹೇಳಿದ್ದರು ಎಂದು ಅವರು ತಿಳಿಸಿದರು.
ಆದುದರಿಂದ ಭಾರತದ ಸಂವಿಧಾನವನ್ನು ಎತ್ತಿ ಹಿಡಿಯುವುದಾಗಿ ಪ್ರಮಾಣ ವಚನ ಸ್ವೀಕರಿಸಿದವರು ದೇಶದ ಪ್ರತಿಯೊಬ್ಬ ವ್ಯಕ್ತಿ ತಮ್ಮ ಧರ್ಮವನ್ನು ಸಮಾನವಾಗಿ ಪ್ರತಿಪಾದಿಸುವ ಹಕ್ಕನ್ನು ಅನುಭವಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಇದೇ ಸಂದರ್ಭ ನಾವು ಒಂದು ಧರ್ಮವನ್ನು ಇತರ ಧರ್ಮಕ್ಕಿಂತ ಹೆಚ್ಚು ಪ್ರಚಾರ ಮಾಡುವುದು ಅಥವಾ ಒಂದು ಧರ್ಮವನ್ನು ಇತರ ಧರ್ಮಗಳ ಮುಂದೆ ಕೀಳಾಗಿ ಕಾಣುವುದು ಸರಿಯಲ್ಲ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.