ಲೋಕಸಭಾ ಚುನಾವಣೆ: ಸ್ಪರ್ಧೆಯಿಂದ ಹಿಂದೆ ಸರಿದ ವಡೋದರ ಕ್ಷೇತ್ರದ ಬಿಜೆಪಿ ಸಂಸದೆ
ಅಹಮದಾಬಾದ್: ವಡೋದರ ಲೋಕಸಭಾ ಕ್ಷೇತ್ರ ಬಿಜೆಪಿ ಸಂಸದೆ ರಂಜನ್ ಬೆನ್ ಭಟ್, ʼವೈಯಕ್ತಿಕ ಕಾರಣʼದಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಅವರನ್ನು ಮುಂಬರುವ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯನ್ನಾಗಿ ಬಿಜೆಪಿ ಕಣಕ್ಕಿಳಿಸಿತ್ತು.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ರಂಜನ್ ಬೆನ್ ಭಟ್, “ನಾನು, ರಂಜನ್ ಬೆನ್ ಧನಂಜಯ್ ಭಟ್, ವೈಯಕ್ತಿಕ ಕಾರಣಗಳಿಂದ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತಿಲ್ಲ” ಎಂದು ಬರೆದುಕೊಂಡಿದ್ದಾರೆ.
ಆದರೆ, ವಡೋದರ ಕ್ಷೇತ್ರದ ಅಭ್ಯರ್ಥಿಯಾಗಿ ರಂಜನ್ ಬೆನ್ ಹೆಸರನ್ನು ಬಿಜೆಪಿ ಘೋಷಿಸಿದ ಬೆನ್ನಲ್ಲೇ ವಡೋದರ ನಗರದ ವಿವಿಧ ಪ್ರದೇಶಗಳಲ್ಲಿ ಅವರನ್ನು ವಿರೋಧಿಸಿ ಭಿತ್ತಿ ಪತ್ರಗಳು ಕಾಣಿಸಿಕೊಂಡಿದ್ದವು. ಈ ಘಟನೆ ಬಳಿಕ ರಂಜನ್ ಬೆನ್ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ರಂಜನ್ ಬೆನ್ ಭಟ್ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದಕ್ಕೆ ಕೆಲವು ಸ್ಥಳೀಯ ಬಿಜೆಪಿ ನಾಯಕರೂ ಅಸಮಾಧಾನ ವ್ಯಕ್ತಪಡಿಸಿದ್ದರು. ವಡೋದರ ಲೋಕಸಭಾ ಕ್ಷೇತ್ರಕ್ಕೆ ಅವರ ಹೆಸರನ್ನು ಮೂರನೆಯ ಬಾರಿಗೆ ಘೋಷಿಸಿದ ನಂತರ ಬಿಜೆಪಿಯ ರಾಷ್ಟ್ರೀಯ ಮಹಿಳಾ ಘಟಕದ ಉಪಾಧ್ಯಕ್ಷೆಯಾದ ಜ್ಯೋತಿ ಬೆನ್ ಪಾಂಡ್ಯ ಕೂಡಾ ತಮ್ಮೆಲ್ಲ ಹುದ್ದೆಗಳಿಗೆ ರಾಜಿನಾಮೆ ಸಲ್ಲಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು.
2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಲ್ಲಿ ಸ್ಪರ್ಧಿಸುವ ಕಾರಣದಿಂದ ತೆರವಾಗಿದ್ದ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ರಂಜನ್ ಬೆನ್ ಭಟ್ ಗೆಲುವು ಸಾಧಿಸಿದ್ದರು. ಇದಾದ ನಂತರ 2019ರ ಲೋಕಸಭಾ ಚುನಾವಣೆಯಲ್ಲೂ ವಡೋದರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದರು. ಮುಂಬರುವ ಲೋಕಸಭಾ ಚುನಾವಣೆಗೂ ಅವರನ್ನೇ ವಡೋದರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಪ್ರಕಟಿಸಲಾಗಿತ್ತು. ಬಿಜೆಪಿಯ ಈ ನಿರ್ಧಾರದ ವಿರುದ್ಧ ಸ್ಥಳೀಯ ಮಟ್ಟದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.