ಲಂಚ ನೀಡಲು ನಿರಾಕರಣೆ: ಬುಡಕಟ್ಟು ಸಮುದಾಯದ ಯುವಕನಿಗೆ ಬಜರಂಗದಳದ ಕಾರ್ಯಕರ್ತರಿಂದ ಹಲ್ಲೆ

Update: 2024-02-15 17:24 GMT

Photo : newindianexpress

ಭೋಪಾಲ : ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಗ್ರಾಮವೊಂದರಲ್ಲಿ ಬಜರಂಗದಳದ ಕಾರ್ಯಕರ್ತರು ಲಂಚ ನೀಡಲು ನಿರಾಕರಿಸಿದ ಬುಡಕಟ್ಟು ಸಮುದಾಯಕ್ಕೆ ಸೇರಿದ ಚಹಾ ಮಾರಾಟ ಮಾಡುವ ಯುವಕನನ್ನು ತಲೆ ಕೆಳಗೆ ಮಾಡಿ ನೇತು ಹಾಕಿ ಬರ್ಬರವಾಗಿ ಹಲ್ಲೆಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

2023 ನವೆಂಬರ್ ನಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಯುವಕ ಆಶಿಶ್ ಪರ್ತೆ ಅವರ ಮೇಲೆ ಬರ್ಬರ ಹಲ್ಲೆ ನಡೆದಿದ್ದು, ಘಟನೆಯ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯ ಸಂಪೂರ್ಣ ವೀಡಿಯೊ ಫೆ. 13ರಂದು ವೈರಲ್ ಆಗಿದೆ.

ಚಹಾದ ಅಂಗಡಿ ನಡೆಸಲು ಲಂಚ ನೀಡುವಂತೆ ಬಜರಂಗದಳದ ಕಾರ್ಯಕರ್ತರು ಆಶಿಶ್ ಪರ್ತೆ ಅವರನ್ನು ಆಗ್ರಹಿಸಿದ್ದರು. ಆದರೆ, ಆಶಿಶ್ ಪರ್ತೆ ಲಂಚ ನೀಡಲು ನಿರಾಕರಿಸಿದಾಗ ಬಜರಂಗದಳದ ಕಾರ್ಯಕತರು ಅವರನ್ನು ಮೊದಲು ವಿವಸ್ತ್ರಗೊಳಿಸಿದ್ದಾರೆ ಹಾಗೂ ತಲೆ ಕೆಳಗೆ ಮಾಡಿ ನೇತು ಹಾಕಿದ್ದಾರೆ. ಅನಂತರ ದೊಣ್ಣೆ ಹಾಗೂ ಬೆಲ್ಟ್ನಿಂದ ಬರ್ಬರವಾಗಿ ಹಲ್ಲೆ ನಡೆಸಿದ್ದಾರೆ. ಆಶಿಶ್ ಪರ್ತೆ ತನ್ನ ತಂದೆಯೊಂದಿಗೆ ಟಿ ಅಂಗಡಿ ನಡೆಸುತ್ತಿದ್ದ.

ಬಂದೂಕು ಹೊಂದಿದ್ದ ಓರ್ವ ತಾನು ಹಿಂದೆ ಕೊಲೆ ಮಾಡಿರುವುದಾಗಿ ಇನ್ನೊಬ್ಬನಿಗೆ ತಿಳಿಸಿದ್ದಾನೆ. ಆದುದರಿಂದ ಪರ್ತೆ ಈ ಕುರಿತು ಯಾರಿಗೂ ತಿಳಿಸಲಾರ ಎಂದು ಹೇಳಿದ್ದಾನೆ ಎಂದು ಎಂದು ಆಶಿಶ್ ಪರ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.

ಘಟನೆಯ ವೀಡಿಯೊ ವೈರಲ್ ಆದ ಬಳಿಕ ಆಶಿಶ್ ಪರ್ತೆ ತನ್ನ ಸಹೋದರನಿಗೆ ಫೆಬ್ರವರಿ 13ರಂದು ತಿಳಿಸಿದ್ದ. ಅನಂತರ ಅವರು ವಿವರವಾದ ದೂರು ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸರು ಬಜರಂಗದಳದ ನಾಯಕ ಚಂಚಲ್ ರಜಪೂತ್ ಹಾಗೂ ಆತನ ಸಹವರ್ತಿಗಳ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ

ರಾಜ್ಯ ಕಾಂಗ್ರೆಸ್ ವರಿಷ್ಠ ಜಿತು ಪಟ್ವಾರಿ ಅವರು ಈ ಘಟನೆಯನ್ನು ಕಟುವಾಗಿ ಖಂಡಿಸಿದ್ದಾರೆ. ದಲಿತರು ಹಾಗೂ ಬುಡಕಟ್ಟು ಸಮುದಾಯದ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News