ಮಣಿಪುರ | ಅಸ್ಸಾಂ ರೈಫಲ್ಸ್ ಬದಲಿಗೆ CRPF ನಿಯೋಜಿಸುವುದರ ವಿರುದ್ಧ ಪ್ರಧಾನಿಗೆ ಪತ್ರ ಬರೆದ ಕುಕಿ-ಝೊ ಶಾಸಕರು
ಇಂಫಾಲ: ಜನಾಂಗೀಯ ಹಿಂಸಾಚಾರದಿಂದ ನಲುಗಿರುವ ಮಣಿಪುರದ ಸೂಕ್ಷ್ಮ ಪ್ರದೇಶಗಳ ಕಾವಲಿಗೆ ಅಸ್ಸಾಂ ರೈಫಲ್ಸ್ ಅನ್ನೇ ಮುಂದುವರಿಸಲು ಹಾಗೂ ಅದರ ಬದಲು ಕೇಂದ್ರ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸದಂತೆ ಖಾತರಿ ಪಡಿಸಲು ಮಧ್ಯಪ್ರವೇಶಿಸಬೇಕು ಎಂದು 10 ಮಂದಿ ಕುಕಿ-ಝೊ ಶಾಸಕರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಮಣಿಪುರದ ಬಿಕ್ಕಟ್ಟನ್ನು ಅಂತ್ಯಗೊಳಿಸಲು ಕಾರ್ಯತತ್ಪರವಾಗಿರುವ ಕೇಂದ್ರ ಸರಕಾರವು, ಮಣಿಪುರದ ಭೂಭಾಗ ಹಾಗೂ ಜನರ ಬಗ್ಗೆ ಸಮರ್ಪಕ ಜ್ಞಾನವಿಲ್ಲದ ಹೊಸ ಪಡೆಗಳನ್ನು ಅಸ್ಸಾಂ ರೈಫಲ್ಸ್ ಬದಲಿಗೆ ನಿಯೋಜಿಸುವುದರಿಂದ ಹಿಂಸಾಚಾರ ಮತ್ತಷ್ಟು ಉಲ್ಬಣಗೊಳ್ಳಬಹುದು ಎಂದು ಕುಕು-ಝೊ ಶಾಸಕರು ತಮ್ಮ ಪತ್ರದಲ್ಲಿ ಎಚ್ಚರಿಸಿದ್ದಾರೆ.
ಕಾಂಗ್ವಾಯ್ ಹಾಗೂ ಕಾಂಗ್ಪೋಕ್ಪಿಯಲ್ಲಿ ನಿಯೋಜಿಸಲಾಗಿರುವ ಅಸ್ಸಾಂ ರೈಫಲ್ಸ್ ನ ಎರಡು ತುಕಡಿಗಳ ಬದಲಿಗೆ ಕೇಂದ್ರ ಮೀಸಲು ಪೊಲೀಸ್ ಪಡೆಯ ತುಕಡಿಗಳನ್ನು ನಿಯೋಜಿಸಲಾಗುತ್ತದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿಗೆ ಬರೆಯಲಾಗಿದೆ.
ಅಸ್ಸಾಂ ರೈಫಲ್ಸ್ ಪಡೆಯು ತಟಸ್ಥವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಶಂಸಿಸಿರುವ ಕುಕಿ-ಝೊ ಶಾಸಕರು, ಅಸ್ಸಾಂ ರೈಫಲ್ಸ್ ಪಡೆಯ ಬದಲು ಕೇಂದ್ರ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸುವ ನಡೆಯು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.