ಸಂಸತ್ ನಲ್ಲಿ ಭಾರೀ ಭದ್ರತಾ ವೈಫಲ್ಯದ ಚರ್ಚೆಗೆ ಪಟ್ಟು : ಉಭಯ ಸದನಗಳಿಂದ ದಾಖಲೆಯ 92 ಪ್ರತಿಪಕ್ಷ ಸಂಸದರ ಅಮಾನತು

Update: 2023-12-18 15:51 GMT

ಲೋಕಸಭೆ | Photo: PTI 

ಹೊಸದಿಲ್ಲಿ: ಸಂಸತ್ ಭದ್ರತಾ ವೈಫಲ್ಯದ ಬಗ್ಗೆ ಕೇಂದ್ರ ಗೃಹಸಚಿವ ಅಮಿತಾ ಶಾ ಅವರ ಹೇಳಿಕೆಗಾಗಿ ಪಟ್ಟು ಹಿಡಿದಿದ್ದ ಲೋಕಸಭೆಯ 33 ಮತ್ತು ರಾಜ್ಯಸಭೆಯ 45 ಸದಸ್ಯರು ಸೇರಿದಂತೆ ಒಟ್ಟು 78 ಪ್ರತಿಪಕ್ಷ ಸಂಸದರನ್ನು ಸಂಸತ್ ಕಲಾಪಗಳಿಗೆ ಅಡ್ಡಿಯನ್ನುಂಟು ಮಾಡಿದ್ದಕ್ಕಾಗಿ ಸೋಮವಾರ ಅಮಾನತುಗೊಳಿಸಲಾಗಿದೆ. ಇದರೊಂದಿಗೆ ಅಮಾನತುಗೊಂಡಿರುವ ಸಂಸದರ ಒಟ್ಟು ಸಂಖ್ಯೆ 92ಕ್ಕೇರಿದೆ. ಕಳೆದ ವಾರ ಕಲಾಪಗಳಿಗೆ ಅಡ್ಡಿಯನ್ನುಂಟು ಮಾಡಿದ್ದಕ್ಕಾಗಿ ಲೋಕಸಭೆಯ 13 ಮತ್ತು ರಾಜ್ಯಸಭೆಯ ಓರ್ವ ಪ್ರತಿಪಕ್ಷ ಸದಸ್ಯರನ್ನು ಅಮಾನತುಗೊಳಿಸಲಾಗಿತ್ತು.

ಸಂಸತ್ ಭದ್ರತೆ ಉಲ್ಲಂಘನೆ ಕುರಿತು ಫಲಕಗಳನ್ನು ಪ್ರದರ್ಶಿಸಿದ್ದಕ್ಕಾಗಿ ಮತ್ತು ಘೋಷಣೆಗಳನ್ನು ಕೂಗಿದ್ದಕ್ಕಾಗಿ ಅಧೀರ ರಂಜನ ಚೌಧುರಿ, ಟಿ.ಆರ್.ಬಾಲು ಮತ್ತು ಸೌಗತ್ ರೇ ಸೇರಿದಂತೆ 33 ಪ್ರತಿಪಕ್ಷ ಸದಸ್ಯರನ್ನು ಲೋಕಸಭೆಯು ಸದನದಿಂದ ಅಮಾನತುಗೊಳಿಸಿತು.

ಪ್ರತಿಪಕ್ಷ ಸದಸ್ಯರು ಭದ್ರತಾ ವೈಫಲ್ಯ ಕುರಿತು ಶಾ ಹೇಳಿಕೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು.

ಡಿಎಂಕೆಯ 10, ಟಿಎಂಸಿಯ ಒಂಭತ್ತು, ಕಾಂಗ್ರೆಸ್‌ನ ಎಂಟು, ಐಯುಎಂಎಲ್, ಜೆಡಿಯು ಮತ್ತು ಆರ್‌ಎಸ್‌ಪಿಯ ತಲಾ ಓರ್ವರು ಸೇರಿದಂತೆ 30 ಸದಸ್ಯರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಮತ್ತು ಇತರ ಮೂವರು ಕಾಂಗ್ರೆಸ್ ಸದಸ್ಯರನ್ನು ಹಕ್ಕು ಬಾಧ್ಯತಾ ಸಮಿತಿಯ ವರದಿ ಬರುವವರೆಗೆ ಅಮಾನತುಗೊಳಿಸಲಾಗಿದೆ.

33 ಸದಸ್ಯರ ಅಮಾನತು ಘೋಷಣೆಯ ಬೆನ್ನಿಗೇ ಲೋಕಸಭೆಯನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಕಾಂಗ್ರೆಸ್‌ನ ಗೌರವ ಗೊಗೊಯಿ ಮತ್ತು ಕೆ.ಮುರಳೀಧರನ್, ಟಿಎಂಸಿಯ ಪ್ರಸೂನ ಬ್ಯಾನರ್ಜಿ ಮತ್ತು ಕಾಕೋಲಿ ಘೋಷ ದಸ್ತಿದಾರ್, ಡಿಎಂಕೆಯ ದಯಾನಿಧಿ ಮಾರನ್ ಮತ್ತು ಎ.ರಾಜಾ ಅವರೂ ಇಂದು ಅಮಾನತುಗೊಂಡ ಲೋಕಸಭಾ ಸಂಸದರಲ್ಲಿ ಸೇರಿದ್ದಾರೆ.

ಸ್ಪೀಕರ್ ವೇದಿಕೆಯನ್ನು ಹತ್ತಿ ಘೋಷಣೆಗಳನ್ನು ಕೂಗಿದ್ದ ಕಾಂಗ್ರೆಸ್ ಸದಸ್ಯರಾದ ಕೆ.ಜಯಕುಮಾರ,ವಿ ಜಯ ವಸಂತ ಮತ್ತು ಅಬ್ದುಲ್ ಖಾಲಿಕ್ ಅವರನ್ನು ಅವರ ಅಸಂಸದೀಯ ನಡವಳಿಕೆ ಕುರಿತು ಹಕ್ಕು ಬಾಧ್ಯತೆ ಸಮಿತಿಯ ವರದಿ ಬರುವವರಗೆ ಅಮಾನತುಗೊಳಿಸಲಾಗಿದೆ.

ಅತ್ತ ರಾಜ್ಯಸಭೆಯಲ್ಲಿ ಸಂಸತ್ ಭದ್ರತಾ ವೈಫಲ್ಯ ಕುರಿತು ಘೋಷಣೆಗಳನ್ನು ಕೂಗಿದ್ದ ಮತ್ತು ಕಲಾಪಗಳಿಗೆ ಅಡ್ಡಿಯನ್ನುಂಟು ಮಾಡಿದ್ದ 45 ಪ್ರತಿಪಕ್ಷ ಸದಸ್ಯರನ್ನು ಅಶಿಸ್ತಿನ ವರ್ತನೆ ಮತ್ತು ಪೀಠದ ನಿರ್ದೇಶನಗಳನ್ನು ಧಿಕ್ಕರಿಸಿದ್ದಕ್ಕಾಗಿ ಸದನದಿಂದ ಅಮಾನತುಗೊಳಿಸಲಾಗಿದೆ.

ಕಾಂಗ್ರೆಸ್ ಸದಸ್ಯರಾದ ಪ್ರಮೋದ್ ತಿವಾರಿ, ಕೆ.ಸಿ.ವೇಣುಗೋಪಾಲ ಮತ್ತು ರಣದೀಪ ಸಿಂಗ್ ಸುರ್ಜೆವಾಲಾ ಹಾಗೂ ಎಸ್‌ಪಿಯ ರಾಮಗೋಪಾಲ ವರ್ಮಾ ಅಮಾನತುಗೊಂಡ ಸದಸ್ಯರಲ್ಲಿ ಸೇರಿದ್ದಾರೆ.

34 ರಾಜ್ಯಸಭಾ ಸಂಸದರನ್ನು ಚಳಿಗಾಲದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದ್ದರೆ, 11ರ ಸದಸ್ಯರಿಗೆ ಅವರ ವರ್ತನೆಯ ಬಗ್ಗೆ ಹಕ್ಕು ಬಾಧ್ಯತಾ ಸಮಿತಿಯ ವಿಚರಣಾ ವರದಿ ಬರುವವರೆಗೆ ಸದನದಿಂದ ದೂರವಿರುವಂತೆ ತಾಕೀತು ಮಾಡಲಾಗಿದೆ.

ಈ ಸಂಬಂಧ ಸದನ ನಾಯಕ ಪಿಯೂಷ್ ಗೋಯಲ್ ಅವರು ಮಂಡಿಸಿದ ಎರಡು ನಿರ್ಣಯಗಳನ್ನು ರಾಜ್ಯಸಭೆಯು ಅಂಗೀಕರಿಸಿತು.

ಮೂರು ತಿಂಗಳುಗಳಲ್ಲಿ ತನ್ನ ವರದಿಯನ್ನು ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದ್ದು, ಅಲ್ಲಿಯವರೆಗೆ 11 ಸದಸ್ಯರು ಸದನದ ಕಲಾಪಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ.

ಸಭಾಪತಿ ಜಗದೀಪ ಧನ್ಕರ್ ಅವರು ಮೊದಲು ಅಮಾನತುಗೊಂಡ ಸದಸ್ಯರ ಹೆಸರುಗಳನ್ನು ಓದಿ ನಂತರ ನಿರ್ಣಯವನ್ನು ಮತಕ್ಕೆ ಹಾಕಿದ್ದು, ಅದು ಧ್ವನಿಮತದಿಂದ ಅಂಗೀಕಾರಗೊಂಡಿತು.

ಸಂಸತ್ತಿನ ಚಳಿಗಾಲದ ಅಧಿವೇಶನವು ಡಿ.22ರಂದು ಅಂತ್ಯಗೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News