ಗರಿಷ್ಠ ತಾಪಮಾನ: ವಿಶ್ವದಾಖಲೆಯ ಸನಿಹಕ್ಕೆ ಬಂದ ರಾಷ್ಟ್ರ ರಾಜಧಾನಿ

Update: 2024-05-30 08:01 IST
ಗರಿಷ್ಠ ತಾಪಮಾನ: ವಿಶ್ವದಾಖಲೆಯ ಸನಿಹಕ್ಕೆ ಬಂದ ರಾಷ್ಟ್ರ ರಾಜಧಾನಿ
  • whatsapp icon

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಬುಧವಾರ ದಾಖಲೆಯ 52.9 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಿಸಿದೆ. ಇದು ಇಡೀ ಭೂಮಿಯಲ್ಲಿ ಇದುವರೆಗೆ ದಾಖಲಾದ ಗರಿಷ್ಠ ಉಷ್ಣಾಂಶವಾದ 56.7 ಡಿಗ್ರಿ ಸೆಲ್ಷಿಯಸ್ ಗಿಂತ ಕೇವಲ 4.4 ಡಿಗ್ರಿಯಷ್ಟು ಕಡಿಮೆ. ಇದುವರೆಗಿನ ಗರಿಷ್ಠ ತಾಪಮಾನ ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿಯ ಗ್ರೀನ್ ಲ್ಯಾಂಡ್ ರಾಂಚ್ ನಲ್ಲಿ ದಾಖಲಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ವಾಯವ್ಯ ದೆಹಲಿಯ ಮಂಗೇಶ್ ಪುರ ಹವಾಮಾನ ಕೇಂದ್ರದಲ್ಲಿ ಮಧ್ಯಾಹ್ನ 2.30ಕ್ಕೆ ಈ ಆಘಾತಕಾರಿ ತಾಪಮಾನ ದಾಖಲಾಗಿದೆ. ನಗರದ ಹೊರವಲಯ ರಾಜಸ್ಥಾನದ ಬಿಸಿಗಾಳಿಯ ಹೊಡೆತಕ್ಕೆ ಸಿಲುಕುವ ಮೊದಲ ಪ್ರದೇಶ ಎಂದು ಐಎಂಡಿ ಪ್ರಾದೇಶಿಕ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಹೇಳಿದ್ದಾರೆ.

ಈಗಾಗಲೇ ತೀವ್ರ ಹವಾಮಾನ ಸ್ಥಿತಿಯಿಂದ ಕಂಗೆಟ್ಟಿರುವ ನಗರದ ಹೊರವಲಯಕ್ಕೆ ಉಷ್ಣಗಾಳಿ ಅಪ್ಪಳಿಸುವ ಸಾಧ್ಯತೆ ಅಧಿಕ. ಮಂಗೇಶ್ ಪುರ, ನರೇಲಾ ಮತ್ತು ನಜಾಫ್ ಗಢದಂತಹ ಪ್ರದೇಶಗಳು ಈ ಉಷ್ಣಗಾಳಿಯ ಪೂರ್ಣ ರಭಸಕ್ಕೆ ಸಿಲುಕುವ ಪ್ರದೇಶಳಾಗಿವೆ ಎಂದು ಕುಲದೀಪ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಭಾರತದಲ್ಲಿ ಇದುವರೆಗಿನ ಗರಿಷ್ಠ ತಾಪಮಾನ 51 ಡಿಗ್ರಿ ಸೆಲ್ಷಿಯಸ್ 2016ರಲ್ಲಿ ರಾಜಸ್ಥಾನದ ಫಲೋಡಿಯಲ್ಲಿ ದಾಖಲಾಗಿತ್ತು. ಮರುಭೂಮಿ ರಾಜ್ಯದ ಚುರುವಿನಲ್ಲಿ 50.8 ಡಿಗ್ರಿ ಸೆಲ್ಷಿಯಸ್ 2019ರಲ್ಲಿ ದಾಖಲಾಗಿದ್ದರೆ, ಅಲ್ವಾರ್ ನಲ್ಲಿ 1956ರಲ್ಲಿ 50.6 ಡಿಗ್ರಿ ಸೆಲ್ಷಿಯಸ್ ತಾಪಮಾನ ವರದಿಯಾಗಿತ್ತು.

ಗಿನ್ನಿಸ್ ವಿಶ್ವದಾಖಲೆಗಳ ಪ್ರಕಾರ 1913ರ ಜುಲೈ 10ರಂದು ಜಗತ್ತಿನ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಈ ಸಂಖ್ಯೆಯ ಬಗ್ಗೆ ಕೆಲವೊಂದು ವಿವಾದಗಳಿದ್ದು, 1922ರಲ್ಲಿ ಲಿಬಿಯಾದಲ್ಲಿ 57.8 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ ಎಂದು ಹೇಳಲಾಗುತ್ತಿದೆ. ಎರಡನೇ ಗರಿಷ್ಠ ತಾಪಮಾನದ ದಾಖಲೆ 54 ಡಿಗ್ರಿ ಸೆಲ್ಷಿಯಸ್ ಆಗಿದ್ದು, ದೆಹಲಿಯ ಉಷ್ಣಾಂಶಕ್ಕಿಂತ ಇದು ಕೇವಲ 1.7 ಡಿಗ್ರಿ ಸೆಲ್ಷಿಯಸ್ ನಷ್ಟು ಅಧಿಕ.

ರಾಷ್ಟ್ರ ರಾಜಧಾನಿ ಬುಧವಾರ ಸರ್ವಕಾಲಿಕ ದಾಖಲೆ ಎನಿಸಿದ 8302 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯನ್ನೂ ದಾಖಲಿಸಿದೆ. ಎಸಿ ಬಳಕೆ ಹೆಚ್ಚಿರುವುದು ಇದಕ್ಕೆ ಪ್ರಮುಖ ಕಾರಣ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News